ಕರ್ನಾಟಕ

ವಿಜ್ಞಾನ ಸಮ್ಮೇಳನ: ವಿಜ್ಞಾನಿಯಿಂದ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ!

Pinterest LinkedIn Tumblr


ಬೆಂಗಳೂರು: ನಗರದಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಕಳ್ಳನೊಬ್ಬ ತನ್ನ ಕೈಚಳಕ ಮೆರೆದಿದ್ದಾನೆ. ಕಳೆದ ವಾರ ಫೈವ್‌ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಮೂಲದ ಮಹಿಳಾ ಜೆನೆಟಿಕ್ ವಿಜ್ಞಾನಿ ಡಾ. ಮಂಜೀತ್ ಮೆಹ್ತಾ ಬಳಿಯಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಸಿಸಿಟಿವಿಯನ್ನು ಪರಿಶೀಲಿಸಿದ ಬಳಿಕ ದರೋಡೆಕೋರರ ಕೃತ್ಯ ಖಚಿತಪಡಿಸಿಕೊಂಡ ಮಂಜೀತ್ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೇ 24, 25ರಂದು ನಗರದ ಫೈವ್ ಸ್ಟಾರ್ ಹೋಟೆಲಿನಲ್ಲಿ ಎರಡು ದಿನಗಳ ಕಾಲ ಸಮ್ಮೇಳನದಲ್ಲಿ ತಾನು ಭಾಗವಹಿಸಿದ್ದೆ. ಈ ಪೈಕಿ ಮೊದಲ ದಿನದಲ್ಲಿ ಪರ್ಸ್ ಅನ್ನು ನನ್ನ ಪಕ್ಕದಲ್ಲಿಟ್ಟು, ಚಿನ್ನವನ್ನು ಅದರಲ್ಲಿಟ್ಟಿದ್ದೆ. ತಾನು ಹೋಟೆಲ್ ರೂಮಿಗೆ ಹೋದ ಬಳಿಕ ಒಡವೆ ಕಳ್ಳತನವಾಗಿರುವ ಬಗ್ಗೆ ನನ್ನ ಅರಿವಿಗೆ ಬಂದಿದೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ವ್ಯಕ್ತಿಯೊಬ್ಬ ನನ್ನ ಬಳಿಯಿದ್ದ ಪರ್ಸ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಡಾ. ಮಂಜೀತ್ ಮೆಹ್ತಾ ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.

ಕಳ್ಳ ಬರುತ್ತಿರುವುದು ಹಾಗೂ ನನ್ನ ಬಳಿ ಕುಳಿತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರ್ಮಿಶನ್ ಇಲ್ಲದೆ ಅವನು ಹಾಲ್‌ಗೆ ಎಂಟ್ರಿಯಾಗಿದ್ದು, ಚಿನ್ನ ಕದ್ದು ಪರಾರಿಯಾಗಿದ್ದಾನೆ ಎಂದು ವಿಜ್ಙಾನಿ ತಿಳಿಸಿದ್ದಾರೆ. ನಂತರ, ಎರಡನೇ ದಿನವೂ ಕಳ್ಳ ಬರುತ್ತಾನೇನೋ ಎಂದು ಕಾರ್ಯಕ್ರಮದ ಆಯೋಜಕರು ನೋಡುತ್ತಿದ್ದರು. ಆದರೆ, ಅವನು ಬರಲಿಲ್ಲ. ಹೀಗಾಗಿ, ನಾನು ನನ್ನ ಭಾಷಣದ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆ ಎಂದು ಸಹ ಮಂಜೀತ್ ಹೇಳಿಕೊಂಡಿದ್ದಾರೆ.

ಡಾ. ಮಂಜೀತ್ ಮೆಹ್ತಾ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆ ಹಾಗೂ ಐ ಜೆನೆಟಿಕ್ ಡಯಾಗ್ನಾಸ್ಟಿಕ್ಸ್‌ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಜತೆಗೆ ಇವರಿಗೆ ಮೆಡಿಕಲ್ ಜೆನೆಟಿಸಿಸ್ಟ್‌ನಲ್ಲಿ 30 ವರ್ಷ ಅನುಭವವಿದೆ.

ಇನ್ನು, ಕಾರ್ಯಕ್ರಮಕ್ಕೆ ಭಾಷಣಕಾರರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಕಳ್ಳ ವಿಜ್ಙಾನಿಗಳ ಗುಂಪಿನೊಂದಿಗೆ ಹೋಟೆಲ್‌ಗೆ ನುಗ್ಗಿರುವುದು ಬೆಳಕಿಗೆ ಬಂದಿದೆ. ಅವನು ಬ್ಯಾಡ್ಜ್ ಕೂಡ ಧರಿಸಿದ್ದು, ಆದರೆ ಅದು ನಾವು ನೀಡಿದ್ದ ಬ್ಯಾಡ್ಜ್ ಅಲ್ಲ ಎಂದು ಸಮ್ಮೇಳನದ ಪ್ರದರ್ಶನ ನಿರ್ವಾಹಕ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಜತೆಗೆ, ಹೋಟೆಲ್ ಭದ್ರತಾ ಸಿಬ್ಬಂದಿಯ ವೈಫಲ್ಯವೇ ಇದಕ್ಕೆ ಕಾರಣ ಎಂದು ಮಣಿಂದರ್ಜಿತ್ ಸಿಂಗ್ ಆರೋಪಿಸಿದ್ದಾರೆ. ಆದರೆ, ಆರೋಪ ತಳ್ಳಿ ಹಾಕಿದ ಭದ್ರತಾ ಸಿಬ್ಬಂದಿ, ಆ ವ್ಯಕ್ತಿ ಬೆಳಗ್ಗಿನಿಂದಲೂ ವಿಜ್ಙಾನಿಗಳ ಜತೆಯಲ್ಲಿ ಇದ್ದ. ಜತೆಗೆ ಅವನು ಧರಿಸಿದ್ದ ಬ್ಯಾಡ್ಜ್‌ ಸಹ ಎಲ್ಲ ಗೆಸ್ಟ್‌ಗಳು ಹಾಕಿಕೊಂಡಿದ್ದ ರೀತಿಯಲ್ಲಿ ಇತ್ತು ಎಂದು ಭದ್ರತಾ ನಿರ್ವಾಹಕ ವಿಶ್ವಾಸ್ ಜಗತಾಪ್ ಸಮರ್ಥನೆ ಮಾಡಿಕೊಂಡಿದ್ದಾರೆ.

Comments are closed.