ಕರ್ನಾಟಕ

ರಾಜ್ಯದ ಹಲವೆಡೆ ಅಬ್ಬರಿಸುತ್ತಿರುವ ಕೃತ್ತಿಕಾ ಮಳೆ!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಕೃತ್ತಿಕಾ ಮಳೆ ಅಬ್ಬರಿಸುತ್ತಿದ್ದು, ರಾಜ್ಯದ ಹಲವೆಡೆ ಗುರುವಾರವೂ ಮಳೆಯಾಗಿದೆ. ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಧಾರವಾಡದಲ್ಲಿ ರಾಜ್ಯದಲ್ಲಿಯೇ ಅಧಿಕ, 6 ಸೆಂ.ಮೀ. ಮಳೆ ಸುರಿಯಿತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.4 ಡಿ.
ಸೆ.ತಾಪಮಾನ ದಾಖಲಾಯಿತು.

ಮೈಸೂರು, ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಮೂರು ದಿನಗಳ ಹಿಂದೆ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಗಾಯಗೊಂಡಿದ್ದ ಮೈಸೂರಿನ ಗಾಂಧಿನಗರದ ನಿವಾಸಿ ಜರೀನಾ(40) ಗುರುವಾರ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಭಾರೀ ಬಿರುಗಾಳಿ ಸಹಿತ ಮಳೆ ಬಿದ್ದಿದ್ದು, 45ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ,ಮರಗಳು, 110ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಂದಾಜು 1,200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ಬಾಳೆ, ಕಬ್ಬುಗಳಿಗೆ ಹಾನಿಯಾಗಿದೆ.

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕಾಡುಕುಂಟೆಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಪಾಲಿಹೌಸ್‌ ಗೆ ಹೊದಿಸಿದ್ದ ಪ್ಲಾಸ್ಟಿಕ್‌ ಹಾಳೆಗಳು ಹಾರಿಹೋಗಿವೆ.

ಪೈಪುಗಳು ಮುರಿದು ಬಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಾ
ದ್ಯಂತ ಸುರಿದ ಗಾಳಿ ಮಳೆಗೆ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದು ನಿಂತ ಬಾಳೆ ಮರಗಳು ಧರೆಗುರುಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಮನೆಯ ತಗಡುಗಳು ಗಾಳಿಗೆ ಹಾರಿ ಹೋಗಿವೆ.

ಹರಪನಹಳ್ಳಿ ತಾಲೂಕಿನಾದ್ಯಂತ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ತಾಲೂಕಿನ ನಾಗತಿಕಟ್ಟೆ ತಾಂಡಾದಲ್ಲಿ ಮನೆಯ ಛಾವಣಿ ಕುಸಿದು ಬಾಣಂತಿಯಾಗಿರುವ ಶಕುಂತಲಾ (23) ಎಂಬುವರು
ಗಾಯಗೊಂಡಿದ್ದಾರೆ. ಈ ವೇಳೆ, ತಮ್ಮ 4 ತಿಂಗಳ ಅವಳಿ ಮಕ್ಕಳನ್ನು ಮಡಿಲಲ್ಲಿ ರಕ್ಷಿಸಿಕೊಂಡಿದ್ದಾರೆ.

ತಾಲೂಕಿನಾದ್ಯಂತ 24ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. 133ಕ್ಕೂ ಹೆಚ್ಚು ವಿದ್ಯುತ್‌ ಕಂಬ
ಗಳು ಧರೆಗುರುಳಿದ್ದು, ದಾಳಿಂಬೆ ಮತ್ತು ಪಪ್ಪಾಯಿ ಬೆಳೆಗಳು ನೆಲಕ್ಕಚ್ಚಿವೆ. ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಬೈಕ್‌ ಮೇಲೆ ಮರ ಬಿದ್ದು, ಹಾದಿಮನಿ ಪ್ರಶಾಂತ್‌ ಎಂಬುವರು ಗಾಯಗೊಂಡಿದ್ದಾರೆ. ಕೂಡ್ಲಿಗಿ,ಸಂಡೂರು, ಸಿರುಗುಪ್ಪ ತಾಲೂಕುಗಳಲ್ಲಿಯೂ ಮಳೆಯಾಗಿದ್ದು, ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಸಿಡಿಲಿಗೆ ಆಕಳೊಂದು ಮೃತಪಟ್ಟಿದೆ.

ಚಿಕ್ಕಮಗಳೂರು, ಕಡೂರು, ಶೃಂಗೇರಿ ಸೇರಿ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ. ಈ ಮಧ್ಯೆ, ಇನ್ನೆರಡು ದಿನ ದಕ್ಷಿಣ ಒಳನಾಡಿನ ಹಲವೆಡೆ, ಕರಾವಳಿಯ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

Comments are closed.