ಕರ್ನಾಟಕ

255 ಗ್ರಾ.ಪಂಗಳಿಗೆ ಜೂ.14ರಂದು ಮತದಾನ , ಜೂ.17ಕ್ಕೆ ಫ‌ಲಿತಾಂಶ

Pinterest LinkedIn Tumblr


ಬೆಂಗಳೂರು: ಹೊಸದಾಗಿ ರಚನೆಯಾದ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದ ಹಾಗೂ ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ 255 ಗ್ರಾಮ ಪಂಚಾಯಿತಿಗಳ 604 ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಅದರಂತೆ ಜೂನ್‌ 14ರಂದು ಮತದಾನ ನಡೆಯಲಿದ್ದು, ಆಯೋಗವು ಮೇ 30ರಂದು ಅಧಿಕೃತ ಅಧಿಸೂಚನೆ ಹೊರಡಿಸಲಿದೆ.

ನಾಮಪತ್ರ ಸಲ್ಲಿಸಲು ಜೂ.2 ಕೊನೇ ದಿನ. ಜೂ.4ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಜೂ.6 ಕೊನೇ ದಿನವಾಗಿದೆ. ಸಂಬಂಧಪಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಮೇ 30ರಿಂದ ಜೂ.17ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಜೂ.17ರಂದು ಫ‌ಲಿತಾಂಶ ಹೊರಬೀಳಲಿದೆ. ತೆರವಾಗಿದ್ದ ಸ್ಥಾನಗಳು: ವಿವಿಧ ಕಾರಣಗಳಿಂದ ತೆರವಾಗಿರುವ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ತಲಾ 1, ರಾಮನಗರ ಜಿಲ್ಲೆಯ 6, ಚಿಕ್ಕಬಳ್ಳಾಪುರದ 4,ಕೋಲಾರದ 2,ತುಮಕೂರಿನ 16, ಚಿತ್ರದುರ್ಗದ 6, ದಾವಣಗೆರೆಯ 25,ಶಿವಮೊಗ್ಗದ 8, ಮೈಸೂರಿನ 14, ಚಾಮರಾಜನಗರದ 5, ಹಾಸನದ 14, ಮಂಡ್ಯ 8, ಕೊಡಗು 5, ಚಿಕ್ಕಮಗಳೂರು 18, ದಕ್ಷಿಣ ಕನ್ನಡ 7, ಉಡುಪಿ 4, ಬೆಳಗಾವಿ 35, ಬಾಗಲಕೋಟೆ 17, ಧಾರವಾಡ 20,ವಿಜಯಪುರ 11, ಗದಗ 8, ಹಾವೇರಿ 6, ಉತ್ತರ ಕನ್ನಡ 5,ಕಲಬುರಗಿ 13, ಬೀದರ್‌ನ 27, ಬಳ್ಳಾರಿಯ 24, ರಾಯಚೂರು 8, ಕೊಪ್ಪಳ 10 ಮತ್ತು ಯಾದಗಿರಿ ಜಿಲ್ಲೆಯ 4 ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ನೋಟಾ ಇಲ್ಲ: ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದ ಕಲಬುರಗಿ ಜಿಲ್ಲೆಯ 15, ವಿಜಯಪುರ ಜಿಲ್ಲೆಯ 2 ಹಾಗೂ
ಹೊಸದಾಗಿ ರಚನೆಯಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಂಟೂರು ಗ್ರಾಪಂಗೂ ಜೂ.14ರಂದೇ ಮತದಾನ ನಡೆಯಲಿದೆ. ಬೀದರ್‌ ಜಿಲ್ಲೆಯ 27 ಹಾಗೂ ಕಲಬುರಗಿ ಜಿಲ್ಲೆಯ 15 ಗ್ರಾಪಂ ಸದಸ್ಯ ಸ್ಥಾನಗಳ ಚುನಾವಣೆಗೆ ಇವಿಎಂ ಬಳಕೆಯಾಗಲಿದ್ದು, ಉಳಿದ ಕಡೆ ಪೇಪರ್‌ ಬ್ಯಾಲೆಟ್‌ ಮೂಲಕ ಮತದಾನ ನಡೆಯಲಿದೆ.
ಗ್ರಾಪಂ ಚುನಾವಣೆಯಲ್ಲಿ “ನೋಟಾ’ಆಯ್ಕೆ ಇರುವುದಿಲ್ಲ ಎಂದು ಆಯೋಗ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳ 9 ವಾರ್ಡ್‌ಗಳಲ್ಲಿ ಜೂನ್‌ 17ರಂದು ಮತದಾನ ಇದೇ ವೇಳೆ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ 9 ವಾರ್ಡ್‌ಗಳಲ್ಲಿ ಜೂ.17ರಂದು ಮತದಾನ ನಡೆಯಲಿದೆ. ಬಿಬಿಎಂಪಿಯ
ಬಿನ್ನಿಪೇಟೆ ವಾರ್ಡ್‌ ಸೇರಿ ದೊಡ್ಡಬಳ್ಳಾಪುರ, ಶ್ರೀನಿವಾಸಪುರ, ಕೆಜಿಎಫ್, ಸಾಗರ,ಬೀದರ್‌ ನಗರಸಭೆ, ಕುಣಿಗಲ್‌ ಪುರಸಭೆ, ಬೋರಗಾಂವ ಮತ್ತು ಮನಗೋಳಿ ಪಟ್ಟಣ ಪಂಚಾಯಿತಿಯ ತಲಾ ಒಂದು ವಾರ್ಡ್‌ಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೆ ನಾಮಪತ್ರ ಸಲ್ಲಿಸಲು ಜೂ.6 ಕೊನೇ ದಿನ. ಜೂ.7ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂ.9 ನಾಮಪತ್ರ ವಾಪಸ್‌ ಪಡೆಯಲು ಕೊನೇ ದಿನವಾಗಿದೆ. ಜೂ.19ರಂದು ಫ‌ಲಿತಾಂಶ ಹೊರಬೀಳಲಿದೆ.

Comments are closed.