ಕರ್ನಾಟಕ

ಸಚಿವ ಸಂಪುಟ ರಚನೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿರುವ ಹೆಚ್’ಡಿಕೆ: ರಾಹುಲ್, ಸೋನಿಯಾರನ್ನು ಆಹ್ವಾನಿಸಲು ದೆಹಲಿಗೆ

Pinterest LinkedIn Tumblr

ನವದೆಹಲಿ; ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ತುದಿಗಾಲಲ್ಲಿ ನಿಂತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು, ಸಚಿವ ಸಂಪುಟ ರಚನೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಅಧಿಕಾರ ಸ್ವೀಕಾರಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಸೋಮವಾರ ರಾಜಧಾನಿ ದೆಹಲಿಗೆ ತೆರಳಲಿದ್ದಾರೆ.

ಇಂದು ಮಧ್ಯಾಹ್ನ 2.30ರ ಸುಮಾರಿಗೆ ದೆಹಲಿಗೆ ಭೇಟಿ ನೀಡಲಿರುವ ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಿಗೆ ಆಮಂತ್ರಣ ನೀಡಲಿದ್ದಾರೆ. ಅಲ್ಲದೆ, ಸಚಿವ ಸಂಪುಟ ರಚನೆ ಕುರಿತು ಕಾಂಗ್ರೆಸ್ ವರಿಷ್ಠರೊಂದಿಗೆ ಮಹತ್ತರ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಮೈತ್ರಿ ಸರ್ಕಾರ ರಚನೆಗೆ ಬೇಷರತ್ ಬೆಂಬಲ ನೀಡಲು ಮುಂದಾಗಿದ್ದ ಜೆಡಿಎಸ್’ಗೆ ಬಾಹ್ಯ ಬೆಂಬಲದ ಪ್ರಸ್ತಾಪವನ್ನು ಇಟ್ಟಿದ್ದ ಕಾಂಗ್ರೆಸ್ ಪಕ್ಷ ಕ್ರಮೇಣ ಷರತ್ತುಗಳನ್ನು ವಿಧಿಸುವ ದಿಸೆಯಲ್ಲಿ ಮುಂದುವರೆದಿದ್ದು, ಅಧಿಕಾರ ಹಂಚಿಕೆ ಸಮಾನ ಹಾಗೂ ಪರಸ್ಪರ ಚರ್ಚೆ ಮೂಲಕ ನಡೆಯಬೇಕೆಂಬ ಸಂದೇಶವನ್ನು ಜೆಡಿಎಶ್ ಪಾಳೆಯಕ್ಕೆ ರವಾನಿಸತೊಡಗಿದೆ.

ಉಪ ಮುಖ್ಯಮಂತ್ರಿ ಹುಡ್ಡೆಗೆ 5 ಪ್ರಭಾವಿ ನಾಯಕರು ಪೈಪೋಟಿ ಆರಂಭಿಸಿದ್ದಾರೆಂದು ಹೇಳಲಾಗುತ್ತಿದ್ದು, ಪರಿಣಾಮ ಒಂದಕ್ಕಿಂತ ಹೆಚ್ಚು ಡಿಸಿಎಂ ಪದವಿ ಸೃಷ್ಟಿಯಾಗುವುದೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾತುಕತೆ ಪ್ರಾರಂಭದ ಹಂತದಲ್ಲಿಯೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಪಕ್ಷದಿಂದ ದಲಿತರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂಬುದು ನಿರ್ಧಾರವಾಗಿತ್ತು. ಆದರೆ, ಇದೀಗ ಈ ಪದವಿಗೆ ಲಿಂಗಾಯತ-ವೀರಶೈವರು ಪ್ರಬಲ ಲಾಭಿ ಆರಂಭಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೆಚ್ಚು ಶಾಸಕ ಸ್ಥಾನ ತಂದುಕೊಟ್ಟಿರುವ ವೀರಶೈವ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಐದು ಮಂದಿಗೆ ಸಚಿವ ಸ್ಥಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರ ಘಟಕ ಒತ್ತಾಯ ಮಾಡಿದೆ.

ಇನ್ನು ಸಂಪುಟ ರಚನೆ ಕುರಿತಂತೆ ಕುಮಾರಸ್ವಾಮಿಯವರು ನಿನ್ನೆ ಬೆಳಿಗ್ಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ, ಎಐಸಿಸಿ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್, ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಂಹಪಾಲಿದ್ದು, 34 ಮಂತ್ರಿಗಿರಿಯಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಜೆಡಿಎಸ್ ಪಕ್ಷ 14 ಸ್ಥಾನಗಳನ್ನು ಪಡೆದುಕೊಳ್ಳಲಿದೆ.

Comments are closed.