ಕರ್ನಾಟಕ

ಇಂದು ಯಡಿಯೂರಪ್ಪರ ರಾಜಕೀಯ ಭವಿಷ್ಯ ನಿರ್ಧಾರ ! ಬಹುಮತದತ್ತ ಎಲ್ಲರ ಚಿತ್ತ !

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮತ್ತೊಂದು ರಾಜಕೀಯ ಮೇಲಾಟಕ್ಕೆ ವಿಧಾನಸಭೆ ಸಾಕ್ಷಿಯಾಗಲಿದ್ದು, ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಗತ್ಯವಿರುವ ಸಂಖ್ಯಾಬಲ ಪಡೆದಲ್ಲಿ ಗೆಲುವು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಮತ್ತೆ ಸರಕಾರ ಇಕ್ಕಟ್ಟಿಗೆ ಸಿಲುಕಲಿದೆ. ಬಹುಮತ ಬಂದರೆ ಸಿಎಂ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆ, ಇಲ್ಲವಾದರೆ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುತ್ತಾರೆ.

ಎಲ್ಲ 222 ಶಾಸಕರು ಸದನಕ್ಕೆ ಹಾಜರಾಗುವುದು ಕಡ್ಡಾಯವಾಗಿದ್ದು, 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ನೂತನವಾಗಿ ಆಯ್ಕೆಯಾದ ಶಾಸಕರಿಗೆ ಹಂಗಾಮಿ ಸ್ಪೀಕರ್ ಬೋಪಯ್ಯ ಪ್ರಮಾಣವಚನ ಬೋಧಿಸಲಿದ್ದಾರೆ. ಬಳಿಕ ಶಾಸಕತ್ವ ಪಡೆದುಕೊಂಡ ಶಾಸಕರು ಪಕ್ಷದ ವಿಪ್ ಪಡೆಯಲಿದ್ದಾರೆ. ಪಕ್ಷದ ವಿಪ್ ಅನುಸಾರ ವಿಶ್ವಾಸಮತ ಯಾಚನೆ ಸಂದರ್ಭ ಮತಚಲಾಯಿಸಬೇಕಾಗುತ್ತದೆ.

ಸುಪ್ರೀಂಕೋರ್ಟ್‌ ಸೂಚನೆಯಂತೆ ಸಂಜೆ 4 ಗಂಟೆಗೆ ಸಿಎಂ ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಮತಯಾಚನೆಗೆ ಮುಂಚೆ ಬಾಗಿಲು ಮುಚ್ಚಲಾಗುತ್ತದೆ. ಸ್ಪೀಕರ್ ವಿಶ್ವಾಸಮತ ಯಾಚನೆಗೆ ಅನುವು ಮಾಡಿಕೊಡಲಿದ್ದು, ಯಾರೆಲ್ಲ ಶಾಸಕರು ಪರ ಮತ್ತು ವಿರೋಧ ಮತ ನೀಡಿದ್ದಾರೆ ಎಂದು ಎಣಿಕೆಯಾಗಿ, ಸಂಖ್ಯಾಬಲದ ಆಧಾರದಲ್ಲಿ ಸ್ಪೀಕರ್ ಫಲಿತಾಂಶ ಘೋಷಿಸಲಿದ್ದಾರೆ. ಪರ ಮತ್ತು ವಿರೋಧ ಸಮಾನ ಮತಗಳು ಬಂದರೆ ಅಲ್ಲಿ ಹಂಗಾಮಿ ಸ್ಪೀಕರ್ ಮತ ಚಲಾವಣೆಗೆ ಅವಕಾಶವಿರುತ್ತದೆ.

ಶುಕ್ರವಾರ ನಡೆದ ಮಹತ್ವದ ವಿಚಾರಣೆಯಲ್ಲಿ ಈ ಆದೇಶ ನೀಡಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ಹಲವು ಷರತ್ತುಗಳನ್ನು ವಿಧಿಸಿದೆ. ಯಡಿಯೂರಪ್ಪ ಅವರನ್ನು ಸರಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರ ಕ್ರಮದ ಬಗ್ಗೆ ತಕ್ಷಣಕ್ಕೆ ತೀರ್ಪು ನೀಡಲು ಬಯಸದ ಪೀಠ, ಸದನದಲ್ಲಿ ಯಾವ ಗುಂಪಿಗೆ ಬೆಂಬಲವಿದೆ ಎಂಬುದನ್ನು ತಿಳಿಯಲು ಶೀಘ್ರ ವಿಶ್ವಾಸಮತ ಪರೀಕ್ಷೆ ನಡೆಯಬೇಕು ಎಂದು ಹೇಳಿತು.

1. ಶನಿವಾರ 4 ಗಂಟೆಗೆ ಸದನದಲ್ಲಿ ಬಲಾಬಲ ಪರೀಕ್ಷೆ

2. ವಿಶ್ವಾಸಮತ ಯಾಚನೆ ವಿಧಾನ ಹಂಗಾಮಿ ಸ್ಪೀಕರ್‌ ನಿರ್ಣಯಕ್ಕೆ

3. ಗೌಪ್ಯ ಮತದಾನಕ್ಕೆ ಅವಕಾಶವಿಲ್ಲ.

4. ಎಲ್ಲಾ ಶಾಸಕರ ರಕ್ಷ ಣೆಯ ಹೊಣೆ ಡಿಜಿಪಿ ನೀಲಮಣಿ ರಾಜು ಜವಾಬ್ದಾರಿ.

5. ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯ ವಿಡಿಯೊ ದಾಖಲೀಕರಣಕ್ಕೆ ಸೂಚನೆ

Comments are closed.