ಕರ್ನಾಟಕ

ಇಂದಿನಿಂದ ಮನೆ ಮನೆಗೆ ವೋಟರ್‌ ಸ್ಲಿಪ್‌

Pinterest LinkedIn Tumblr


ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಮನೆ ಬಾಗಿಲಿಗೆ ಗುರುವಾರದಿಂದ ವೋಟರ್‌ ಸ್ಲಿಪ್‌ ತಲುಪಿಸಲು ಬಿಬಿಎಂಪಿಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ವೋಟರ್‌ ಸ್ಲಿಪ್‌ ಜತೆಗೆ ಮತದಾನದ ಮಾರ್ಗದರ್ಶಿ ಕೈಪಿಡಿಯನ್ನು ಸಹ ನೀಡಲಾಗುತ್ತದೆ.

ನಗರದಲ್ಲಿ ಒಟ್ಟು 91,13,095 ಮಂದಿ ಮತದಾರರಿದ್ದು, ಚುನಾವಣಾ ಸಿಬ್ಬಂದಿಯು ಮನೆ ಮನೆಗೆ ಭೇಟಿ ನೀಡಿ ವೋಟರ್‌ ಸ್ಲಿಪ್‌ಗಳನ್ನು ವಿತರಿಸಲಿದ್ದಾರೆ. ಈ ವೋಟರ್‌ ಸ್ಲಿಪ್‌ನಲ್ಲಿ ಮತದಾರರ ಹೆಸರು, ಭಾವಚಿತ್ರ, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆಯ ವಿವರವಿರಲಿದೆ. ಇದೇ ಮೊದಲ ಬಾರಿಗೆ ಮತದಾನದ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡುವ ಕೈಪಿಡಿಯನ್ನೂ ಸಹ ಕೊಡಲಾಗುತ್ತಿದೆ. ಅಲ್ಲದೇ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದವರಿಗೆ ಚುನಾವಣಾ ಗುರುತಿನ ಚೀಟಿಯನ್ನೂ ಇದೇ ಸಂದರ್ಭದಲ್ಲಿ ವಿತರಿಸಲಿದ್ದಾರೆ.

ನಗರ ಜಿಲ್ಲಾಡಳಿತ ಮತ್ತು ಪಾಲಿಕೆಯ 8278 ಮಂದಿ ಸಿಬ್ಬಂದಿ ಮತದಾರರ ಮನೆ ಬಾಗಿಲಿಗೆ ವೋಟರ್‌ ಸ್ಲಿಪ್‌, ಮತದಾನ ಮಾರ್ಗದರ್ಶಿ ಕೈಪಿಡಿ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ತಲುಪಿಸುವ ಕೆಲಸ ಮಾಡಲಿದ್ದಾರೆ. ಮೂರು ದಿನಗಳ ಕಾಲ ವೋಟರ್‌ ಸ್ಲಿಪ್‌ಗಳನ್ನು ವಿತರಿಸಲಾಗುತ್ತದೆ. ಮನೆಯಲ್ಲಿ ಲಭ್ಯವಿಲ್ಲದವರಿಗೆ ಮತದಾನದ ದಿನದಂದು ಮತಗಟ್ಟೆಗಳ ಬಳಿಯೇ ವೋಟರ್‌ ಸ್ಲಿಪ್‌ಗಳನ್ನು ವಿತರಿಸಲಾಗುತ್ತದೆ. ಇದಕ್ಕೂ ಅಗತ್ಯ ಸಿದ್ಧತೆಗಳನ್ನು ಪಾಲಿಕೆ ಕೈಗೊಂಡಿದೆ.

”ಪಾಲಿಕೆ ಸಿಬ್ಬಂದಿಯು ಮೇ 6ರವರೆಗೆ ವೋಟರ್‌ ಸ್ಲಿಪ್‌, ಮತದಾನ ಮಾರ್ಗದರ್ಶಿ ಕೈಪಿಡಿಯನ್ನು ಮತದಾರರ ಮನೆ ಮನೆಗೆ ತೆರಳಿ ವಿತರಣೆ ಮಾಡಲಿದ್ದಾರೆ. ಈ ಬಾರಿ ಹೊಸದಾಗಿ 4.40 ಲಕ್ಷ ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದ್ದಾರೆ. ಈ ಪೈಕಿ ಶೇ 70ರಷ್ಟು ಮಂದಿಗೆ ಚುನಾವಣಾ ಗುರುತಿನ ಚೀಟಿ ನೀಡಲಾಗಿದೆ. ಬಾಕಿ ಉಳಿದವರಿಗೆ ವೋಟರ್‌ ಸ್ಲಿಪ್‌ ಜತೆ ತಲುಪಿಸಲಾಗುತ್ತಿದೆ,” ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

”ಒಟ್ಟು 91,13,095 ಮತದಾರರ ವೋಟರ್‌ ಸ್ಲಿಪ್‌ಗಳನ್ನು ಮುದ್ರಿಸಲಾಗಿದೆ. ಅಷ್ಟೂ ವೋಟರ್‌ ಸ್ಲಿಪ್‌ಗಳು ಮತ್ತು ಮತದಾನ ಮಾರ್ಗದರ್ಶಿ ಕೈಪಿಡಿಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಅವರು ಅದನ್ನು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿನ ಮತದಾರರಿಗೆ ವಿತರಿಸಲಿದ್ದಾರೆ. ವೋಟರ್‌ ಸ್ಲಿಪ್‌ ಪಡೆಯಲಾಗದವರಿಗೆ ಮತದಾನದ ದಿನದಂದೇ ಮತಗಟ್ಟೆ ಬಳಿ ನೀಡಲಾಗುವುದು. ಮತಗಟ್ಟೆಯಿಂದ 100 ಮೀ. ಅಂತರದಲ್ಲಿ ಚುನಾವಣಾ ಸಿಬ್ಬಂದಿಯು ಸ್ಲಿಪ್‌ಗಳನ್ನು ವಿತರಣೆ ಮಾಡಲಿದ್ದಾರೆ. ರಾಜಕೀಯ ಪಕ್ಷಗಳು ಸಹ ವೋಟರ್‌ ಸ್ಲಿಪ್‌ಗಳನ್ನು ನೀಡಬಹುದು. ಆದರೆ, ಅದರಲ್ಲಿ ಪಕ್ಷದ ಅಭ್ಯರ್ಥಿ ಹೆಸರು, ಚಿಹ್ನೆ ಇರಕೂಡದು,” ಎಂದು ಹೇಳಿದರು.

Comments are closed.