ಕರ್ನಾಟಕ

ಹಗೆ ಸಾಧಿಸುತ್ತಿರುವ ಸಿಂಧೂರಿ: ಮಂಜು ದೂರು

Pinterest LinkedIn Tumblr


ಹಾಸನ: ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಉದ್ದೇಶರ್ಪೂಕವಾಗಿ ತಮ್ಮ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ರಾಜ್ಯ ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಆರು ಪುಟಗಳ ಸುದೀರ್ಘ‌ ಪತ್ರ ಬರೆದು ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡಿರುವ ಸಚಿವ ಎ.ಮಂಜು, ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ತಮ್ಮ ಮೇಲೆ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರನ್ನು ವಾಪಸ್‌ ಪಡೆಯಲು ನಿರ್ದೇಶನ ನೀಡಬೇಕೆಂದೂ ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ?: ಲೋಕೋಪಯೋಗಿ ಇಲಾ ಖೆಯ ಪ್ರವಾಸಿ ಮಂದಿರದ ಕಟ್ಟಡದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರವೂ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಅವರು ತಮಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದರು.

ಈ ಸಂಬಂಧ ತಾವು ಏ.2 ರಂದು ಸ್ಪಷ್ಟನೆ ನೀಡಿ ಕ್ಯಾಬಿನೆಟ್‌ ದರ್ಜೆ ಸಚಿವನಾಗಿರುವ ನಾನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲದಂತೆ ನನ್ನ ಕರ್ತವ್ಯ ನಿರ್ವಹಣೆಗೆ ಅನುವು ಮಾಡಿಕೊಡುವಂತೆ ಕೋರಿದ್ದೆ. ಆದರೂ ಸಹಾಯಕ ಚುನಾವಣಾಧಿಕಾರಿಯವರ ಮೂಲಕ ಪೋಲೀಸ್‌ ಠಾಣೆಗೆ ದೂರು ಕೊಡಿಸಿ ಐಪಿಸಿ ಸೆಕ್ಷನ್‌ 188 ರ ಪ್ರಕಾರ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪತ್ರದಲ್ಲಿ ವಿವರ ನೀಡಿದ್ದಾರೆ.

ನೀತಿ ಸಂಹಿತೆ ನೆಪದಲ್ಲಿ ಜಿಲ್ಲಾಧಿಕಾರಿಯವರು ತಮಗೆ ತೊಂದರೆ ಕೊಡುವ ಮೂಲಕ ಜಿಲ್ಲಾಧಿ ಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ
ಯವರ ಕಚೇರಿಯನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಆವರನ್ನು ವರ್ಗಾವಣೆ ಮಾಡಿ ಜಿಲ್ಲೆಯಲ್ಲಿ ಪಾರದರ್ಶಕ ವಾಗಿ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಯಲು ಕ್ರಮ ಕೈಗೊಳ್ಳಬೇಕು. ತಮ್ಮ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳ ಬೇಕು. ನೀತಿ ಸಂಹಿತೆ ಜಾರಿ ಸಂಬಂಧ ಮಾ.27 ಮತ್ತು ಮಾ.31 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ವಶಕ್ಕೆ ತೆಗೆದುಕೊಂಡ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

ಅಧಿಕಾರ ದುರ್ಬಳಕೆ ಸಾಬೀತು: ಡಿಸಿ
ಎ.ಮಂಜು ಅವರ ವಿರುದ್ಧ ಎಫ್ಐಆರ್‌ ದಾಖಲಿಸಿರುವ ಕ್ರಮವನ್ನು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸಮರ್ಥಿಸಿಕೊಂಡಿದ್ದಾರೆ. ಸಚಿವರು ಬೆಂಗಳೂರಿನ ಕಚೇರಿ ಹೊರತುಪಡಿಸಿ, ಜಿಲ್ಲಾ ಕಚೇರಿ ಬಳಸುವಂತಿಲ್ಲ. ಸಚಿ ವರು ತಮ್ಮ ಕಚೇರಿ ದುರ್ಬಳಕೆ ಮಾಡಿಕೊಂಡಿ ರುವ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಅದನ್ನು ಆಧರಿಸಿ ಪರಿಶೀಲಿಸಿದಾಗ ಸಚಿವ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡುವುದು ಕಂಡು ಬಂದಿದೆ. ಈ ಬಗ್ಗೆ ಕಾರಣ ಕೇಳಿ ಸಚಿವರಿಗೆ ನೀಡಿದ ನೋಟಿಸ್‌ಗೆ ಸಮರ್ಥನೀಯ ಉತ್ತರ ಬಂದಿಲ್ಲ. ಹಾಗಾಗಿ ಅವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ರೋಹಿಣಿ ಹೇಳಿದ್ದಾರೆ.

ಅರಕಲಗೂಡಿನಲ್ಲಿ ದಿನಾಂಕ ತಿದ್ದಿ 1093 ಮಂದಿಗೆ ಬಗರ್‌ಹುಕುಂ ಯೋಜನೆ ಅಡಿ ಸಾಗುವಳಿ ಪತ್ರ ನೀಡಲಾಗಿದೆ. ಇದು ಮತದಾರ ರಿಗೆ ಆಮಿಷ ಒಡ್ಡಿ ತಮ್ಮತ್ತ ಸೆಳೆಯುವ ಪ್ರಯತ್ನ. ನೀತಿ ಸಂಹಿತೆಯ ಉಲ್ಲಂಘನೆಯೂ ಹೌದು. ಸಾಗುವಳಿ ಪತ್ರ ನೀಡಿರುವ ಸಚಿವರು ಹಾಗೂ ಕೆಲ ಅಧಿಕಾರಿಗಳು, ನಂತರ ಸುಳ್ಳು ದಿನಾಂಕ ನಮೂದಿಸಿದ್ದಾರೆ.

ಪರಿಶೀಲಿಸಿದಾಗ ತಪ್ಪು ಆಗಿರುವುದು ಕಂಡು ಬಂದಿದೆ. ಈ ಕಾರಣಕ್ಕೆ ಸಚಿವರಿಗೆ ನೋಟಿಸ್‌ ನೀಡಲಾಗಿದೆ. ತಪ್ಪಿಗೆ ಸಹಕರಿಸಿದ ತಹಶೀಲ್ದಾರ್‌ ಸಸ್ಪೆಂಡ್‌ ಶಿಫಾರಸು, ಪ್ರಥಮ ದರ್ಜೆ ಸಹಾಯಕನ ಅಮಾನತು ಮಾಡಲಾಗಿದೆ. ನೋಟಿಸ್‌ಗೆ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಹಾಸನ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಚಿವ ಎ.ಮಂಜು ನೀಡಿರುವ ದೂರಿನ ಸಂಬಂಧ ಮೈಸೂರು ಪ್ರಾದೇಶಿಕ ಆಯುಕ್ತರಿಂದ ತನಿಖೆಗೆ ಸೂಚಿಸಲಾಗಿದೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಸಂಜೀವ್‌ಕುಮಾರ್‌, ಮುಖ್ಯ ಚುನಾವಣಾಧಿಕಾರಿ

ನಾನು ಟಿಕೆಟ್‌ ಆಕಾಂಕ್ಷಿಯಾಗಿದ್ದೆ, ನಿಜ. ಈಗ ಮನಸ್ಸಿಗೆ ಬೇಜಾರಾಗಿರುವುದೂ ನಿಜ. ಆದರೆ, ನಮ್ಮ ಕುಟುಂಬದಲ್ಲೇ ಇಬ್ಬರು ಸ್ಪರ್ಧಿಸುವ ಕಾರಣ ಹಿಂದೆ ಸರಿದಿದ್ದೇನೆ. ದೇವೇಗೌಡರು ನನಗೆ ದೇವರಿದ್ದ ಹಾಗೆ. ಕುಮಾರಸ್ವಾಮಿಗೂ ಗೌರವ ನೀಡುತ್ತೇನೆ.
-ಪ್ರಜ್ವಲ್‌ ರೇವಣ್ಣ, ಜೆಡಿಎಸ್‌ ಯುವ ನಾಯಕ

ಜನರ ಮತೀಯ ಭಾವನೆ ಕೆರಳಿಸಿ ಮತ ಪಡೆಯುವುದೇ ಬಿಜೆಪಿಯ ಚುನಾವಣಾ ಅಸ್ತ್ರವಾಗಿದೆ. ಹೀಗಾಗಿ, ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಆದರೆ, ಕಾಂಗ್ರೆಸ್‌ ಜನರ ಮನ್‌ ಕೀ ಬಾತ್‌ ಆಲಿಸಿ ಅದನ್ನು ಪರಿಹರಿಸುವ ಕಾರ್ಯ ಮಾಡುತ್ತಿದೆ.
-ಬಿ.ರಮಾನಾಥ ರೈ, ಸಚಿವ

-ಉದಯವಾಣಿ

Comments are closed.