ಕರ್ನಾಟಕ

ಸಿದ್ದು ಫೋಟೋ ನೋಡಿದಷ್ಟು ಬಿಜೆಪಿಗೆ ಮತ​​​​​​​

Pinterest LinkedIn Tumblr


ಮೈಸೂರು/ಮಂಡ್ಯ: ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೋ ನೋಡಿದಷ್ಟೂ ಬಿಜೆಪಿಗೆ ಹೆಚ್ಚು ಮತ ನೀಡಲಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ವ್ಯಂಗ್ಯವಾಡಿದ್ದಾರೆ.

ಮಂಡ್ಯದ ಹೊರವಲಯದಲ್ಲಿ 5 ಜಿಲ್ಲೆಗಳ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಕ್ಕದಲ್ಲಿದ್ದ “ಇಂದಿರಾ ಕ್ಯಾಂಟೀನ್‌’ ಮೇಲಿರುವ ಸಿದ್ದರಾಮಯ್ಯನವರ ಫೋಟೋ ತೆಗೆಸುವಂತೆ ಬಿಜೆಪಿ ಮುಖಂಡರು ಆಗ್ರಹ ಪಡಿಸಿದರು. ಇದಕ್ಕೆ ಉತ್ತರಿಸಿದ ಶಾ, ಆತುರ ಬೇಡ. ಸಿದ್ದರಾಮಯ್ಯ ಫೋಟೋ ಇದ್ದಷ್ಟು ನಮಗೇ ಲಾಭ. ಕಾಂಗ್ರೆಸ್‌ ದುರಾಡಳಿತವನ್ನು ಕಂಡಿರುವ ಜನರು ಸಿದ್ದು ಫೋಟೋ ನೋಡಿದಷ್ಟು ಬಿಜೆಪಿಗೆ ಹೆಚ್ಚು ಮತ ಹಾಕುವರು ಎಂದು ಹೇಳಿದರು.

“ನನ್ನನ್ನು ಬಿಜೆಪಿಯ ಚುನಾವಣಾ ಚಾಣಕ್ಯ ಎನ್ನುತ್ತಾರೆ. ಅದರೆ, ಚಾಣಕ್ಯ ನಾನಲ್ಲ. ಬೂತ್‌ ಮಟ್ಟದ ಹಾಗೂ ಶಕ್ತಿಕೇಂದ್ರಗಳ ಕಾರ್ಯಕರ್ತರೇ ನಿಜವಾದ ಚಾಣಕ್ಯರು. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು 18 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಅವುಗಳನ್ನು ಕಾರ್ಯಕರ್ತರು ಹಾಗೂ ಮುಖಂಡರು ಪಾಲಿಸಿದರೆ ರಾಜ್ಯದಲ್ಲೂ ಬಿಜೆಪಿ ಬಾವುಟ ಹಾರಿಸಬಹುದು’ ಎಂದರು.

ಸಿದ್ದು ಸರ್ಕಾರ ಕಾಂಗ್ರೆಸ್‌ಗೆ ಎಟಿಎಂ:
ಇದಕ್ಕೂ ಮೊದಲು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳದೆ, ಸ್ಪೀಡ್‌ ಬ್ರೇಕರ್‌ನಂತೆ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೂಗೆದು, ಬಿಜೆಪಿಗೆ ಅಧಿಕಾರ ನೀಡಲು ಕರ್ನಾಟಕದ ಜನತೆ ಉತ್ಸುಕರಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಎಟಿಎಂನಂತೆ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರೆಡ್ಡಿಗೂ, ಬಿಜೆಪಿಗೂ ಸಂಬಂಧವಿಲ್ಲ:
ಮಾಜಿ ಸಚಿವ ಜನಾರ್ದನ ರೆಡ್ಡಿ ಜತೆಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅಮಿತ್‌ ಶಾ, ಸಂವಿಧಾನ ಬದಲಾವಣೆ ಕುರಿತು ನೀಡಿದ ಹೇಳಿಕೆಗೆ ಅನಂತಕುಮಾರ್‌ ಹೆಗಡೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ, ಸಿದ್ದರಾಮಯ್ಯ ಸರ್ಕಾರ ಆ ವಿಚಾರದಲ್ಲಿ ಅಪಪ್ರಚಾರ ನಡೆಸುತ್ತಿದೆ ಎಂದು ದೂರಿದರು. ಮೈಸೂರು ರಾಜವಂಶಸ್ಥರ ಜತೆಗಿನ ಮಾತುಕತೆಯ ಗುಟ್ಟು ಬಿಟ್ಟುಕೊಡಲು ಒಪ್ಪದ ಅಮಿತ್‌ ಶಾ, ಅದೊಂದು ಸೌಜನ್ಯದ ಭೇಟಿ. ಮಾತುಕತೆಯ ವಿವರ ಬಹಿರಂಗಪಡಿಸಲಾಗಲ್ಲ ಎಂದರು.

ಮೇಲುಕೋಟೆಗೆ ಭೇಟಿ
ಮಂಡ್ಯ: ಶನಿವಾರ ಮಧ್ಯಾಹ್ನ ಅಮಿತ್‌ ಶಾ ಮೇಲುಕೋಟೆಗೆ ಭೇಟಿ ನೀಡಿ, ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಶಾ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಇದರಿಂದಾಗಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಸಿಗಲಿಲ್ಲ. ಶಾ ಭೇಟಿ ಸಮಯದಲ್ಲಿ ದೇವಾಲಯದ ಆಡಳಿತ ಮಂಡಳಿ ದೇವರ ದರ್ಶನದ ಅವಧಿಯನ್ನು ವಿಸ್ತರಣೆ ಮಾಡುವ ಮೂಲಕ ನಿಯಮಾವಳಿ ಉಲ್ಲಂಘನೆ ಮಾಡಿದೆ. ಸಾಮಾನ್ಯ ದಿನಗಳಲ್ಲಿ ದರ್ಶನ ಮಧ್ಯಾಹ್ನ 1.30ರೊಳಗೆ ಮುಗಿಯುತ್ತಿತ್ತು. ಶಾ ಅವರು ದರ್ಶನ ಪಡೆಯಲು ಆಗಮಿಸಿದ್ದ ವೇಳೆ ಮಧ್ಯಾಹ್ನ 1.30ರ ನಂತರವೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ರೈತ ಗೀತೆಗೆ ಅವಕಾಶ ನೀಡದ ಶಾ:
ಮಂಡ್ಯ: ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಾವಯವ ಕೃಷಿಕರು, ರೈತ ಮಹಿಳಾ ಸಹಕಾರಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅಮಿತ್‌ ಶಾ ರೈತಗೀತೆಗೆ ಅವಮಾನ ಮಾಡಿದ ಘಟನೆ ನಡೆಯಿತು. ಕಾರ್ಯಕ್ರಮದಲ್ಲಿ ಉದ್ಘಾಟನೆಗೂ ಮುನ್ನ ರೈತ ಗೀತೆ ಹಾಡುವುದಕ್ಕೆ ತಯಾರಿ ನಡೆಸಿದ್ದರು. ಅಷ್ಟರಲ್ಲಿ ರೈತ ಗೀತೆಗೆ ಅವಕಾಶ ಬೇಡವೆಂದ ಶಾ, ನೇರವಾಗಿ ಭಾಷಣಕ್ಕಿಳಿದರು. ಖಾಲಿ ಕುರ್ಚಿಗಳಿಂದ ಭಣಗುಡುತ್ತಿದ್ದುದನ್ನು ಕಂಡು ರಾಜ್ಯ ನಾಯಕರ ವಿರುದ್ಧ ಗರಂ ಆದರು.

ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವ ಶಿಫಾರಸನ್ನು ಮನಮೋಹನ್‌ ಸಿಂಗ್‌ ಸರ್ಕಾರ ತಿರಸ್ಕರಿಸಿತ್ತು. ಆದರೂ ನಾಲ್ಕೂವರೆ ವರ್ಷ ಸುಮ್ಮನಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಡಿಯೂರಪ್ಪ ಅವರನ್ನು ಘೋಷಿಸಿದ ಬಳಿಕ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದನ್ನು ಬಿಜೆಪಿ ಸಮರ್ಥವಾಗಿ ಎದುರಿಸಲಿದೆ.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ.

-ಉದಯವಾಣಿ

Comments are closed.