ಕರ್ನಾಟಕ

ಎಟಿಎಂಗೆ ತುಂಬಬೇಕಿದ್ದ ₹52 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಯುವಕ ಕೊನೆಗೂ ಬಂಧನ

Pinterest LinkedIn Tumblr

ಬೆಂಗಳೂರು: ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ₹52 ಲಕ್ಷ ಕದ್ದೊಯ್ದು ತನ್ನ ಮನೆಯ ಕೊಟ್ಟಿಗೆಯಲ್ಲಿ ಅವಿತಿಟ್ಟಿದ್ದ ‘ಸಿಎಂಎಸ್ ಸರ್ವಿಸ್ ಏಜೆನ್ಸಿ’ಯ ಕಸ್ಟೋಡಿಯನ್ ಪರಮೇಶ್ (24) ಮಾರತ್ತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಪರಮೇಶ್, ಮಾರ್ಚ್ 9ರಂದು ಹಣದೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಏಜೆನ್ಸಿ ವ್ಯವಸ್ಥಾಪಕ ಲೋಕೇಶ್ ಮಾರತ್ತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು. ಆರೋಪಿಯ ಮಾವ ಕೆಎಸ್‌ಆರ್‌ಪಿಯಲ್ಲಿ ಎಸ್‌ಐ ಆಗಿದ್ದು, ಅವರು ನೀಡಿದ ಸುಳಿವು ಆಧರಿಸಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಎಟಿಎಂ ಕೆಟ್ಟಿದ್ದೇ ವರವಾಯ್ತು: ಸುಳ್ಯದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದ ಆರೋಪಿ, ವರ್ಷದ ಹಿಂದೆ ನಗರಕ್ಕೆ ಬಂದು ಸಿಎಂಎಸ್ ಸರ್ವಿಸ್ ಏಜೆನ್ಸಿಯಲ್ಲಿ ಕಸ್ಟೋಡಿಯನ್ (ಎಟಿಎಂಗೆ ಹಣ ತುಂಬುವ ಕೆಲಸ) ಆಗಿ ಕೆಲಸಕ್ಕೆ ಸೇರಿದ್ದ.

ಸಿಎಂಎಸ್ ಏಜೆನ್ಸಿಯು ಐಸಿಐಸಿಐ, ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಕರ್ಣಾಟಕ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದೆ. ಅಧಿಕಾರಿಗಳ ಸೂಚನೆಯಂತೆ ಮಾರ್ಚ್ 9ರ ಬೆಳಿಗ್ಗೆ ಆರೋಪಿ ಮಾರತ್ತಹಳ್ಳಿ ಮಾರ್ಗದಲ್ಲಿ ಕರ್ತವ್ಯಕ್ಕೆ ತೆರಳಿದ್ದ. ಐಸಿಐಸಿಐ ಬ್ಯಾಂಕ್‌ನಿಂದ ₹52 ಲಕ್ಷ ಸಂಗ್ರಹಿಸಿಕೊಂಡ ಆತ, ಮಾರತ್ತಹಳ್ಳಿ ತುಳಸಿ ಚಿತ್ರಮಂದಿರ ಸಮೀಪದ ಎಟಿಎಂಗೆ ಹಣ ತುಂಬಲು ಹೊರಟಿದ್ದ.

ಆದರೆ, ಆ ಘಟಕದ ಯಂತ್ರ ಕೆಟ್ಟಿದ್ದರಿಂದ ಹಣವನ್ನು ಗೊರಗುಂಟೆಪಾಳ್ಯದ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ. ಪರಮೇಶ್ ರಾತ್ರಿಯಾದರೂ ಕಚೇರಿಗೆ ಮರಳದಿದ್ದಾಗ ಅಧಿಕಾರಿಗಳು ಕರೆ ಮಾಡಿದ್ದರು. ಆಗ ಆತ, ‘ಎಟಿಎಂ ಘಟಕಕ್ಕೆ ಹಣ ತುಂಬಿದ್ದೇನೆ. ತಾಯಿಗೆ ಹುಷಾರಿಲ್ಲದ ಕಾರಣ ಮೈಸೂರಿಗೆ ಹೊರಟಿದ್ದೇನೆ. ನಾಳೆ ಮಧ್ಯಾಹ್ನ ಕೆಲಸಕ್ಕೆ ಬರುತ್ತೇನೆ’ ಎಂದಿದ್ದ.

ಅಂತೆಯೇ ಮರುದಿನ ಸಂಜೆ ಪರಮೇಶ್ ಕರ್ತವ್ಯಕ್ಕೆ ಹಾಜರಾಗಿದ್ದ. ಮಾರ್ಚ್ 12ರಂದು ಏಜೆನ್ಸಿಗೆ ಕರೆ ಮಾಡಿದ್ದ ಬ್ಯಾಂಕ್ ಅಧಿಕಾರಿಗಳು, ‘ತುಳಸಿ ಚಿತ್ರಮಂದಿರ ಸಮೀಪದ ಎಟಿಎಂ ಯಂತ್ರ ಕೆಟ್ಟು ಹೋಗಿದೆ. ಅದಕ್ಕೆ ಹಣ ತುಂಬಬೇಡಿ’ ಎಂದಿದ್ದರು. ಈಗಾಗಲೇ ಪರಮೇಶ್ ಹಣ ತುಂಬಿದ್ದಾನೆ ಎಂದು ಭಾವಿಸಿದ ಅಧಿಕಾರಿಗಳು, ತಕ್ಷಣ ಆತನನ್ನು ಕರೆದು ಹಣ ವಾಪಸ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು.

ಅಂತೆಯೇ ಕಚೇರಿಯಿಂದ ಹೊರಟ ಆರೋಪಿ, ನೇರವಾಗಿ ಗೊರಗುಂಟೆಪಾಳ್ಯದ ತನ್ನ ಮನೆಗೆ ತೆರಳಿದ್ದ. ಅಲ್ಲಿಂದ ಹಣದ ಬ್ಯಾಗ್ ತೆಗೆದುಕೊಂಡು ಸೋಮವಾರಪೇಟೆಗೆ ಬಸ್ ಹತ್ತಿದ್ದ. ಇತ್ತ ಅಧಿಕಾರಿಗಳು ಮೂರ್ನಾಲ್ಕು ದಿನಗಳಿಂದ ಕರೆ ಮಾಡಿದರೂ, ಪರಮೇಶ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡ ವ್ಯವಸ್ಥಾಪಕ ಲೋಕೇಶ್, ಮಾರ್ಚ್ 17ರಂದು ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಬಂಧನಕ್ಕೆ ಕಾರ್ಯಾಚರಣೆ ಶುರು ಮಾಡಿದ್ದರು.

ಪರಮೇಶ್‌ನ ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಪೊಲೀಸರು ಸೋಮವಾರಪೇಟೆಗೆ ತೆರಳಿದ್ದರು. ಅಷ್ಟರಲ್ಲಾಗಲೇ ಆರೋಪಿ, ತನ್ನ ಮನೆಯ ಕೊಟ್ಟಿಗೆಯಲ್ಲಿನ ಹಂಡೆಯಲ್ಲಿ ಹಣದ ಬ್ಯಾಗ್ ಇಟ್ಟು ಪರಾರಿಯಾಗಿದ್ದ.

ಪೊಲೀಸರು ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆರೋಪಿಯ ಮಾವ ಕೆಎಸ್‌ಆರ್‌ಪಿ ಎಸ್‌ಐ ಎಂಬ ವಿಚಾರ ತಿಳಿದ ಪೊಲೀಸರು, ತನಿಖೆಗೆ ಅವರ ಸಹಕಾರ ಕೋರಿದ್ದರು.

ಪರಮೇಶ್ ಮನೆಗೆ ಬಂದು ಹೋಗಿದ್ದ ವಿಚಾರವನ್ನು ಖಚಿತಪಡಿಸಿಕೊಂಡ ಅವರು, ಜಮೀನು ಹಂಚಿಕೆ ವಿಚಾರವಾಗಿ ಮಾತನಾಡಬೇಕಿದೆ ಎಂದು ಸುಳ್ಳು ಹೇಳಿ ಮಾರ್ಚ್ 26ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆತ ಬರುತ್ತಿದ್ದಂತೆಯೇ ಪೊಲೀಸರು ಸುತ್ತುವರಿದು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.

Comments are closed.