ಕರ್ನಾಟಕ

ರಾಜ್ಯದ ಹಲವೆಡೆ ತಂಪೆರೆದ ಮಳೆ

Pinterest LinkedIn Tumblr


ಬೆಂಗಳೂರು: ರಾಜಧಾನಿ ಬೆಂಗಳೂರು, ಕೋಲಾರ, ಮುಳಬಾಗಿಲು,ಮಾಲೂರು, ಹಾಸನ, ಮಂಗಳೂರು, ಉಡುಪಿ ಸೇರಿ ರಾಜ್ಯದ ಕೆಲವೆಡೆ ಶುಕ್ರವಾರ ಭಾರಿ ಮಳೆಯಾಗಿದೆ.

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಶುರುವಾದ ಮಳೆಯಿಂದಾಗಿ ಸುಮಾರು 20ಕ್ಕೂ ಹೆಚ್ಚು ಮರ ನೆಲಕ್ಕು ರುಳಿವೆ. ಅಲ್ಲದೆ, ಹಲವಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಯಿತು.

ಗಾಳಿ ಸಹಿತ ಮಳೆಗೆ ಶಂಕರಮಠ, ಮಲ್ಲೇಶ್ವರ, ಗೊರಗುಂಟೆ ಪಾಳ್ಯ, ಬಿಎಂಶ್ರೀ ಮುಖ್ಯರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಯಶವಂತಪುರ, ಬಾಣಸವಾಡಿ, ಮಡಿವಾಳ, ಸಂಜಯ್‌ನಗರ, ನಾಗರಬಾವಿ, ಬನಶಂಕರಿ 2ನೇ ಹಂತ ಸೇರಿದಂತೆ ಹಲವಾರು ಕಡೆಗಳಲ್ಲಿ ಬೃಹದಾಕಾರದ ಮರಗಳು ಧರೆಗುರುಳಿದ ಪರಿಣಾಮ ತೀವ್ರ ಸಂಚಾರ ದಟ್ಟಣೆ ವಾಹನ ಸವಾರರು ತೊಂದರೆಗೊಳಗಾದರು.

ಪಾಲಿಕೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಬಿದ್ದ ಮರಗಳನ್ನು ತೆರವುಗೊಳಿಸಿದರು. ಕೆಲವು ಭಾಗಗಳಲ್ಲಿ ಮರದ ಕೊಂಬೆಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್‌ ಕಂಬಗಳು ಸಹ ಉರುಳಿದ್ದು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಆದರೆ, ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-ಉದಯವಾಣಿ

Comments are closed.