ಕರ್ನಾಟಕ

ನಾನೇ ಹಗ್ಗ ತಂದುಕೊಡುತ್ತೇನೆ, ನನ್ನನ್ನು ಗಲ್ಲಿಗೇರಿಸಿ: ಎಂ.ಬಿ.ಪಾಟೀಲ್​

Pinterest LinkedIn Tumblr


ಬೆಂಗಳೂರು: ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲರನ್ನು ಗಲ್ಲಿಗೇರಿಸಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್​, ಈಗಾಗಲೇ ನೀವು ಲಿಂಗಾಯತರನ್ನು, ಬಸವಣ್ಣನವರನ್ನು ಗಲ್ಲಿಗೇರಿಸಿದ್ದೀರಾ. ಈಗ ನನ್ನ ಸರದಿ. ನಾನೇ ಹಗ್ಗ ತಂದುಕೊಡುತ್ತೇನೆ, ನನ್ನನ್ನು ಗಲ್ಲಿಗೇರಿಸಿ ಎಂದಿದ್ದಾರೆ.

ವಿಧಾನ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್​, ಯಡಿಯೂರಪ್ಪನವರೇ ನಿಮ್ಮವರೇ ನಿಮ್ಮನ್ನ ಗಲ್ಲಿಗೇರಿಸುತ್ತಾರೆ. ಇಲ್ಲವಾದರೆ ನೀವೇ ಬಿಜೆಪಿಯನ್ನು ಗಲ್ಲಿಗೇರಿಸುತ್ತೀರಿ ಎಂದು ಟೀಕಿಸಿದರು.

ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್​ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಯಡಿಯೂರಪ್ಪನವರು ಆರೋಪಿಸಿದ್ದರು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಎನ್​ಪಿಸಿಸಿ ಲಿಮಿಟೆಡ್, ಅಮೃತ ಕನ್​ಸ್ಟ್ರಕ್ಷನ್ ಹಾಗೂ ಆರ್​ಎನ್​ಎಸ್ ಸಂಸ್ಥೆ ಟೆಂಡರ್​ಗೆ ಅರ್ಜಿ ಹಾಕಿದ್ದವು. ಅರ್ಜಿ ಹಾಕಿದ್ದ ಕಂಪನಿಗಳಿಗೆ ಮೂಲ ದಾಖಲೆ ಸಲ್ಲಿಸಲು ತಿಳಿಸಿದ್ದೆವು. ಅದರಂತೆ ಎನ್​ಪಿಸಿಸಿ ಕಂಪನಿ ನಕಲಿ ದಾಖಲೆ ಸಲ್ಲಿಸಿತ್ತು. ಹಾಗಾಗಿ ಟೆಂಡರ್ ರದ್ದುಪಡಿಸಲಾಗಿದೆ. ಮತ್ತೆ ಬುಧವಾರ (ಮಾ.21) ವಿಶ್ವೇಶ್ವರಯ್ಯ ಜಲ ನಿಗಮ ಹೊಸದಾಗಿ ಟೆಂಡರ್ ಕರೆದಿದೆ ಎಂದು ಸ್ಪಷ್ಟನೆ ನೀಡಿದರು.

ನಿಮಗೆ ಗೌರವವಿದೆ, ನಿಮ್ಮ ಕೆಲಸಕ್ಕಲ್ಲ
ನೀವು ಹಿರಿಯರು. ನಿಮಗೆ ನಾನು ಗೌರವ ಕೊಡುತ್ತೇನೆ. ಆದರೆ, ನೀವು ಮಾಡುತ್ತಿರುವ ಕೆಲಸಕ್ಕೆ ಗೌರವ ಕೊಡುವುದಿಲ್ಲ. ಈಗೀಗ ನೀವು ಜೋಕರ್ ಆಗಿ ಪರಿವರ್ತನೆಯಾಗುತ್ತಿದ್ದೀರ. ಟೆಂಡರ್ ಕರೆಯುವುದು ಇಲಾಖೆಯ ಅಧಿಕಾರಿಗಳು. ಟೆಂಡರ್ ಸ್ಕ್ರ್ಯೂಟಿನಿ ನಡೆದ ನಂತರ ದಾಖಲೆಗಳ ಪರಿಶೀಲನೆ ಆಗುತ್ತದೆ. ನಂತರ ನಿಗಮದ ಅಧ್ಯಕ್ಷರ ಒಪ್ಪಿಗೆ ಅವಶ್ಯ. ಈ ಎಲ್ಲ ಹಂತ ಮುಗಿಸಿ ಟೆಂಡರ್ ಅಂತಿಮವಾಗುತ್ತದೆ ಎಂದು ವಿವರಿಸಿದರು.

ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದವರು. ಆಗ ಯಡಿಯೂರಪ್ಪ ಹಲವು ನಿಗಮಗಳ ಅಧ್ಯಕ್ಷರೂ ಆಗಿದ್ದರು. ಅವರಿಗೆ ಈ ಪ್ರಕ್ರಿಯೆಗಳ ಬಗ್ಗೆ, ನಿಗಮಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಗೊತ್ತಿರಬೇಕಿತ್ತು. ಆದರೆ, ಅವರಿಗೆ ಅರಳುಮರುಳಾಗಿರಬಹುದು. ಅವರು ನೀಡಿರುವ ಬ್ರೇಕಿಂಗ್​ ನ್ಯೂಸ್​ ಠುಸ್ ಆಗಿದೆ ಎಂದರು.

Comments are closed.