ಕರ್ನಾಟಕ

ಬೆಂಗಳೂರಿನಲ್ಲಿ ಬರಲಿವೆ ಸೋಲಾರ್‌ ರಿಚಾರ್ಜಿಂಗ್‌ ಸ್ಟೇಷನ್‌

Pinterest LinkedIn Tumblr

ಬೆಂಗಳೂರು: ಭವಿಷ್ಯದ ಪರಿಸರ ಸ್ನೇಹಿ ವಾಹನ ಎಂದೇ ಹೇಳಲಾಗುತ್ತಿರುವ ಎಲೆಕ್ಟ್ರಿಕ್‌ ವಾಹನಗಳ ರಿಚಾರ್ಜಿಂಗ್‌ ಕೇಂದ್ರವನ್ನು ಬೆಸ್ಕಾಂ ಇತ್ತೀಚೆಗೆ ಆರಂಭಿಸಿದೆ. ಇದರ ಬೆನ್ನಲ್ಲೇ ನಗರದಲ್ಲಿ ಎರಡು ಸೋಲಾರ್‌ ರಿಚಾರ್ಜಿಂಗ್‌ ಕೇಂದ್ರ ಆರಂಭಿಸಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ.

ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಡಾ.ಹರೀಶ್‌ ಹಂದೆ ಈ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮುಂದೆ ಇಟ್ಟಿದ್ದಾರೆ. ಜಯನಗರ ಹಾಗೂ ಯಲಹಂಕ ಭಾಗದಲ್ಲಿ ಸೋಲಾರ್‌ ರಿಚಾರ್ಜಿಂಗ್‌ ಕೇಂದ್ರ ಆರಂಭಿಸಲು ಸೂಕ್ತ ಎಂಬ ಮಾಹಿತಿಯನ್ನು ಸೆಲ್ಕೊ ಸಂಸ್ಥೆ ಸಂಗ್ರಹಿಸಿದೆ. ಈ ವಿಷಯವನ್ನು ಹರೀಶ್‌ ಹಂದೆ ಅವರೇ ಬಹಿರಂಗಪಡಿಸಿದ್ದಾರೆ.

ಇಸ್ರೇಲ್‌ ಸೇರಿದಂತೆ ವಿದೇಶಗಳಲಷ್ಟೇ ಸೋಲಾರ್‌ ರೀಚಾರ್ಜಿಂಗ್‌ ಕೇಂದ್ರಗಳು ಇವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಆರಂಭಿಸುವ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ. ರಾಜ್ಯ ಸರಕಾರದ ಜತೆ ಮಾತುಕತೆ ನಡೆದಿದೆ. ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಇದಕ್ಕೊಂದು ರೂಪ ಸಿಗಬಹುದು ಎಂದು ಹರೀಶ್‌ ಹಂದೆ ಅವರು ಮಾಧ್ಯಮದವರೊಂದಿಗೆ ಬುಧವಾರ ನಡೆಸಿದ ಸಂವಾದದಲ್ಲಿ ತಿಳಿಸಿದರು.

ಪೆಟ್ರೋಲ್‌ ಪಂಪ್‌ ಮಾದರಿಯಲ್ಲಿ ಇಸ್ರೇಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಬದಲಾವಣೆ ಮಾಡಿಕೊಡುವ ಸ್ಟೇಷನ್‌ಗಳು ಇವೆ. ಅಂದರೆ ಬಳಸಿದ ಬ್ಯಾಟರಿ ಕೊಟ್ಟು ರಿಚಾರ್ಜ್‌ ಮಾಡಿರುವ ಬ್ಯಾಟರಿ ಪಡೆದುಕೊಂಡು ಹೋಗಬಹುದು. ಇದಕ್ಕಾಗಿ ವಾಹನ ಚಾರ್ಜ್‌ ಆಗುವವರೆಗೂ ಕಾಯುವ ಅಗತ್ಯವಿಲ್ಲ. ಅದೇ ಮಾದರಿಯಲ್ಲಿ ರಿಚಾರ್ಜಿಂಗ್‌ ಕೇಂದ್ರ ಆರಂಭಿಸುವ ಆಲೋಚನೆ ಇದೆ. ಮೊದಲು ಆಟೊಗಳಿಗೆ ಅನುಕೂಲ ಆಗುವ ಚಾರ್ಜಿಂಗ್‌ ಕೇಂದ್ರದ ಕಡೆ ಗಮನಹರಿಸಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಆಟೊಗಳು ಇರುವುದರಿಂದ ಎಲೆಕ್ಟ್ರಿಕ್‌ ಆಟೊ ಬಳಕೆ ಮಾಡುವುದರಿಂದ ಮಾಲಿನ್ಯ ಪ್ರಮಾಣವೂ ತಗ್ಗಲಿದೆ ಎಂದು ಹೇಳಿದರು.

ಬೆಸ್ಕಾಂ ಆರಂಭಿಸಿರುವ ರಿಚಾರ್ಜಿಂಗ್‌ ಕೇಂದ್ರದಲ್ಲಿ ಬ್ಯಾಟರಿ ಬದಲಾಯಿಸುವ ವ್ಯವಸ್ಥೆ ಇಲ್ಲ. ವಾಹನವನ್ನು ರಿಚಾರ್ಜಿಂಗ್‌ ಕೇಂದ್ರದಲ್ಲೇ ನಿಲ್ಲಿಸಿ ರಿಚಾರ್ಜ್‌ ಮಾಡಬೇಕಾಗಿದೆ. ಇದರಿಂದ ವಾಹನ ಚಾಲರು ಇಲ್ಲವೇ ಕಾರು ಮಾಲೀಕರು ಗಂಟೆಗಟ್ಟಲೇ ಕಾಯಬೇಕಾಗಬಹುದು. ಬ್ಯಾಟರಿ ರಿಚಾರ್ಜ್‌ ಮಾಡಿಕೊಡುವ ವ್ಯವಸ್ಥೆ ಬಂದರೆ ಹೆಚ್ಚು ಅನುಕೂಲ ಆಗಲಿದೆ.

Comments are closed.