ಕರ್ನಾಟಕ

ಕರ್ನಾಟಕಕ್ಕೆ ಖುಷಿ ಕೊಟ್ಟ ಕಾವೇರಿ ತೀರ್ಪು: ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು!

Pinterest LinkedIn Tumblr

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಕಟಿಸಿತು.

ಕರ್ನಾಟಕಕ್ಕೆ ಒಟ್ಟು 284.75 ಟಿಎಂಸಿ ನೀರು ಬಳಸಿಕೊಳ್ಳಬಹುದು ಹಾಗೂ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ. ತಮಿಳುನಾಡಿಗೆ ಪ್ರತಿ ವರ್ಷ ಹರಿಸುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆ ಮಾಡಿದ್ದು, ತಮಿಳುನಾಡಿಗೆ 177 ಟಿಎಂಸಿ ನೀರು ನಿಗದಿ ಪಡಿಸಿದೆ. ಈ ಮೂಲಕ ಕರ್ನಾಟಕ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಸಿಕೊಳ್ಳಬಹುದಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್‌ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿತು.

ಕಾವೇರಿ ಕಣಿವೆಯಲ್ಲಿ ವಾರ್ಷಿಕ ಲಭ್ಯವಿರುವ ಒಟ್ಟು 740 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದ ನ್ಯಾಯಮಂಡಳಿ. ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚಿಸಿತ್ತು. ಈ ಪ್ರಮಾಣವನ್ನು 102 ಟಿಎಂಸಿ ಅಡಿಗೆ ಇಳಿಸುವಂತೆ ಕರ್ನಾಟಕ ಬೇಡಿಕೆ ಸಲ್ಲಿಸಿತ್ತು.

ಪ್ರಕರಣದ ಹಿನ್ನೆಲೆ:
1990ರಲ್ಲಿ ರಚಿಸಲಾಗಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿಯು ಸತತ 17 ವರ್ಷಗಳ ಕಾಲ ವಿಚಾರಣೆ ನಡೆಸಿ 2007ರ ಫೆಬ್ರುವರಿ 5ರಂದು ನೀಡಿದ್ದ ಐತೀರ್ಪಿನಲ್ಲಿದ್ದ ಕೆಲವು ಅಂಶಗಳನ್ನು ಒಪ್ಪದೇ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು.

ಈ ಸಂಬಂಧ 2017ರ ಜುಲೈ 11ರಿಂದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, 2017ರ ಸೆಪ್ಟೆಂಬರ್‌ 20ರವರೆಗೆ ಒಟ್ಟು 28 ದಿನ ವಿಚಾರಣೆ ನಡೆಸಿ ತೀರ್ಪನ್ನು ಕಾದಿರಿಸಿತ್ತು.

Comments are closed.