ಕರಾವಳಿ

ಕುಂದಾಪುರ: ನಿವೇಶನ ರಹಿತರ ಮನೆಗಳ ತೆರವು: ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಗರಂ: ನೂರಾರು ಪೊಲೀಸರ ನಿಯೋಜನೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಕಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಸಟ್ವಾಡಿ ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಮನೆ ಹಾಗೂ ತಾತ್ಕಾಲಿಕ ಚಪ್ಪರ, ಜೋಪಡಿ ನಿರ್ಮಿಸಿಕೊಂಡಿದ್ದ ಬಡ ವಾಸಿಗಳನ್ನು ಬುಧವಾರ ಬೆಳ್ಳಬೆಂಳಗ್ಗೆ ನೂರಾರು ಪೊಲೀಸರ ಬಲದಿಂದ ತಾಲ್ಲೂಕು ಆಡಳಿತ ಒಕ್ಕಲೆಬ್ಬಿಸಿದೆ. ಕುಂದಾಪುರ ತಹಶೀಲ್ದಾರ್ ಜಿ.ಎಂ ಬೋರ್ಕರ್ ನೇತೃತ್ವ ಮುಂಜಾನೆ ನಡೆದ ದಾಳಿ ಇದಾಗಿತ್ತು.

ಮೂರ್ನಾಲ್ಕು ಜೆಸಿಬಿ, ಡಿವೈ‌ಎಸ್ಪಿ ಸಹಿತ ವಿವಿಧ ಠಾಣೆಯ ನಾಲ್ಕೈದು ಎಸ್ಸೈಗಳು, ಇನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಕುಂದಾಪುರದ ತಹಶಿಲ್ದಾರ್, ಉಪತಹಶಿಲ್ದಾರ್ ಸಹಿತ ಇಬ್ಬರು ಕಂದಾಯ ನಿರೀಕ್ಷಕರು, 30 ಮಂದಿ ಗ್ರಾಮ ಲೆಕ್ಕಿಗರು, 25ಕ್ಕೂ ಅಧಿಕ ಗ್ರಾಮ ಸಹಾಯಕರ ಜೊತೆ ೫೦ಕ್ಕೂ ಅಧಿಕ ಕೂಲಿಯಾಳುಗಳನ್ನು ಉಪಯೋಗಿಸಿಕೊಂಡು ಕುಂದಾಪುರ ತಾಲೂಕು ಆಡಳಿತ ನಿವೇಶನ ರಹಿತರ ಮನೆ ಹಾಗೂ ಜೋಪಡಿ ತೆರವಿಗೆ ಮುಂದಾಗಿತ್ತು.

ಸಟ್ವಾಡಿಯ ಸರ್ವೇ ನಂಬರ್ 151/ಪಿ1 ರಲ್ಲಿ ಬರುವ ಸುಮಾರು 24 ಎಕ್ರೆ ಜಾಗದಲ್ಲಿ ನಾಲ್ಕು ತಿಂಗಳ ಹಿಂದೆ ದಲಿತ ಸಂಘರ್ಷ ಸಮಿತಿಯ ಭೀಮ ಘರ್ಜನೆ ಸಂಘಟನೆಯ ನೇತ್ರತ್ವ 80ಕ್ಕೂ ಅಧಿಕ ಎಸ್ಸಿ ಎಸ್ಟಿ ಹಾಗೂ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ 150ಕ್ಕೂ ಅಧಿಕ ಕುಟುಂಬಗಳು ಸರಕಾರಿ ಜಾಗದಲ್ಲಿ ಬಿಡಾರ ಹೂಡಿದ್ದರು. ಅಂದಿನಿಂದಲೂ ಈ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು ಇದಕ್ಕೆ ಶಾಸಕರ ಸಹಿತ ಕೆಲ ಜನಪ್ರತಿನಿಧಿಗಳ ಬೆಂಬಲ ಇತ್ತೆಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ. ಇಂದು ಮುಂಜಾನೆ ಯಾವುದೇ ಮುನ್ಸೂಚನೆಯಿಲ್ಲದೇ ಪೊಲೀಸರ ಬೆಂಗಾವಲಿನೊಂದಿಗೆ ಸ್ಥಳಕ್ಕೆ ದೌಡಾಯಿಸಿದ ತಹಶಿಲ್ದಾರ್ ನೇತೃತ್ವದ ತಂಡ ಮನೆಗಳ ತೆರವು ಕಾರ್ಯಾಚರಣೆ ನಡೆಸಿದೆ.

ಈ ವೇಳೆ ಪೊಲೀಸರಿಗೆ ಪ್ರತಿರೋಧವೊಡ್ಡಿದ ಕರ್ನಾಟಕ ಕೃಷಿಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ ಸೇರಿದಂತೆ ಸ್ಥಳೀಯವಾಗಿ ಮನೆಮಾಡಿಕೊಂಡಿದ್ದ ಎಂಟು ಮಂದಿ ನಿವೇಶನ ರಹಿತರನ್ನು ಬಂಧಿಸಿದ್ದು, ಹೋರಾಟಗಾರರನ್ನು ಕಂಡ್ಲೂರು ಠಾಣೆಯಲ್ಲಿಡಲಾಗಿದೆ. ಅಲ್ಲದೇ ಒಂದಷ್ಟು ಲಾಠಿ ಪ್ರಹಾರ ನಡೆಸಲಾಗಿದೆ ಎನ್ನುವ ಆರೋಪವನ್ನು ಮಾಡುತ್ತಿದ್ದಾರೆ ಸಂತ್ರಸ್ತರು. ಉಣ್ಣುವ ಅನ್ನವನ್ನು ನೆಲಕ್ಕೆ ಎಸೆದಿದ್ದಾರೆ, ಓಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಲ್ಲದೇ ಲಂಚದ ಪ್ರಭಾವದಿಂದ ನಮ್ಮನ್ನು ಏಳಿಸುತ್ತಿದ್ದು ಭೂಮಾಲೀಕರ ಆಮೀಷಕ್ಕೆ ಅಧಿಕಾರಿಗಳು ಒಳಗಾಗಿದ್ದಾರೆನ್ನುವ ಆರೋಪವೂ ಕೇಳಿಬಂದಿದೆ. ಈಗಾಗಲೇ ೧೦ ಎಕರೆಗಿಂತ ಜಾಸ್ತಿ ಜಮೀನು ಹೊಂದಿರುವ ಕೆಲವು ಶ್ರೀಮಂತರಿಗೆ ಕುಮ್ಕಿ ಹಕ್ಕಿನ ನೆಪದಲ್ಲಿ ಇನ್ನೂ ೩ ಎಕರೆಗಿಂತ ಹೆಚ್ಚಿನ ಜಮೀನು ನೀಡಲಾಗಿದೆ. ಆದರೆ ೫ ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ೧೫೨ ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.

ತೆರವು ಕಾರ್ಯಾಚರಣೆ ವೇಳೆ ಗುಡಿಸಲಿಗೆ ಬೆಂಕಿ ಬಿದ್ದಿದ್ದು ಒಂದೆಡೆ ಬೆಂಕಿಯನ್ನು ಅಧಿಕಾರಿಗಳು ಹಾಕಿದ್ದಾರೆ ಎನ್ನುವ ಆರೋಪ ಸ್ಥಳೀಯರು ಮಾಡುತ್ತಿದ್ದಾರೆ. ತಮ್ಮ ಗುಡಿಸಲಿಗೆ ಅವರೇ ಬೆಂಕಿ ಹಾಕಿಕೊಂಡಿದ್ದಾರೆ ಎನ್ನುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಎಸ್ಪಿ ಭೇಟಿ..
ಕಂಡ್ಲೂರು ಪೊಲೀಸ್ ಠಾಣೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಭೇಟಿ ನೀಡಿ ಪ್ರತಿಭಟನಕಾರರ ಮನವೊಲಿಸಿದರು ಎನ್ನಲಾಗಿದೆ.

Comments are closed.