ಕರ್ನಾಟಕ

“ಪರಿವರ್ತನಾ ರ್ಯಾಲಿಗೆ ಬಂದವರು ಪೇಮೆಂಟ್‌ ಕಾರ್ಯಕರ್ತರು’

Pinterest LinkedIn Tumblr


ತುಮಕೂರು: ಜಿಲ್ಲೆಯಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಮಣೆ ಹಾಕಲಾಗಿದೆ. ಪೇಮೆಂಟ್‌ ಕಾರ್ಯಕರ್ತರನ್ನು ಕರೆ ತಂದು ರ್ಯಾಲಿ ಮಾಡಲಾಗಿದೆ ಎಂದು ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆ ಮೂಲಕ ಪಕ್ಷದಲ್ಲಿನ ಭಿನ್ನಮತ ಮತ್ತೂಮ್ಮೆ ಬಹಿರಂಗಗೊಂಡಿದೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, “ಶನಿವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ಅವರು ಪೋನ್‌ ಮಾಡಿದರು. 11 ಗಂಟೆಗೆ ಕಾರ್ಯಕ್ರಮ ಇಟ್ಟುಕೊಂಡು 9
ಗಂಟೆಗೆ ಪೋನ್‌ ಮಾಡಿದರೆ ಹೇಗೆ ಭಾಗವಹಿಸಲಿ. ಬರುವುದಾದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ವಿಷ ಹಾಕಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಅದಕ್ಕೆ ನಾನು ತಯಾರಿಲ್ಲ. ರ್ಯಾಲಿಗೆ 500, 1000 ರೂ. ನೀಡಿ ಜನರನ್ನು ಕರೆತರಲಾಗಿತ್ತು. ಯಡಿಯೂರಪ್ಪ ಅವರು ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಜಿ.ಎಸ್‌.ಬಸವರಾಜು ಮತ್ತು ಅವರ ಮಗ ಜ್ಯೋತಿ ಗಣೇಶ್‌ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಿಷ್ಠಾವಂತರನ್ನು ಮಲತಾಯಿಯ ಮಕ್ಕಳಂತೆ ಕಾಣುತ್ತಿದ್ದಾರೆ’ ಎಂದರು.

“ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪರಿವರ್ತನಾ ರ್ಯಾಲಿಯಲ್ಲಿ ಎಲ್ಲಿಯೂ ಅಭ್ಯರ್ಥಿಗಳ ಘೋಷಣೆ ಮಾಡದಂತೆ ಎಚ್ಚರಿಕೆ ನೀಡಿದ್ದರೂ ಅದನ್ನು ಉಲ್ಲಂಘನೆ ಮಾಡಿ, ತುರುವೇಕೆರೆ ಮತ್ತು ತುಮಕೂರಿನಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿದೆ. ಆದರೆ, ಮುಂಬರುವ ಚುನಾವಣೆಯಲ್ಲಿ ನಾನು ತುಮಕೂರು ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿಯೇ ಕಣದಲ್ಲಿರುತ್ತೇನೆ’ ಎಂದು ಹೇಳಿದರು.

-ಉದಯವಾಣಿ

Comments are closed.