ಕರ್ನಾಟಕ

ಅಲ್ಲಿ ಜಡಿ ಮಳೆ, ಇಲ್ಲಿ ಗಡ ಗಡ ಚಳಿ

Pinterest LinkedIn Tumblr


ಬೆಂಗಳೂರು: ಬಂಗಾಳಕೊಲ್ಲಿ ಸಮೀಪ ಮೇಲ್ಮೈಸುಳಿಗಾಳಿ ಉಂಟಾದ ಪರಿಣಾಮ ತಮಿಳುನಾಡಿನಲ್ಲಿ ಮಳೆ ಆರಂಭವಾಗಿದೆ. ಇದರಿಂದ ನಗರಕ್ಕೆ ಮಳೆ ಬಾರದಿದ್ದರೂ ದಿಢೀರ್‌ ಹವಾಮಾನ ಬದಲಾವಣೆಯಾಗಿ ಚಳಿ ಶುರುವಾಗಿದೆ.

ನಗರದಲ್ಲಿ ಚಳಿಗಾಲ ಆರಂಭಕ್ಕೂ ಮುನ್ನವೇ ಚಳಿಯ ಅನುಭವವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಸುತ್ತಮುತ್ತ ಪರಿಣಾಮ ಹೆಚ್ಚಿದೆ. ಸೋಮವಾರ ಮಧ್ಯಾಹ್ನದಿಂದಲೇ ನಗರದಲ್ಲಿ ಜೋರಾದ ಗಾಳಿ ಬೀಸುತ್ತಿದೆ. ಜತೆಗೆ ಮೋಡ ಕವಿದ ವಾತಾವರಣವಿದೆ. ಇದರ ಪರಿಣಾಮದಿಂದ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯೂ ಇದೆ.

ಇನ್ನು ಐದು ದಿನ ಚಳಿ

ಮೇಲ್ಮೈ ಸುಳಿಗಾಳಿಯ ಪರಿಣಾಮ ಇನ್ನೂ ಐದು ದಿನ ಚಳಿ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ 3 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಲಕ್ಷ ದ್ವೀಪದ ಬಳಿ 3 ರಿಂದ 5 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರಿಂದ ದಕ್ಷಿಣದ ತುದಿಯಲ್ಲಿ ಮಳೆ ಬರುತ್ತಿದೆ. ಇದರ ಪರಿಣಾಮ ರಾಜ್ಯಕ್ಕೂ ತಟ್ಟಿದೆ.

”ರಾಜ್ಯಕ್ಕೆ ಇತ್ತೀಚೆಗೆ ಹಿಂಗಾರು ಪ್ರವೇಶವಾಗಿದ್ದು, ಚಳಿಗಾಲ ಇನ್ನೂ ಆರಂಭವಾಗಿಲ್ಲ. ಆದರೆ ಮೇಲ್ಮೈ ಸುಳಿಗಾಳಿಯಿಂದಾಗಿ ತಂಪಾದ ಗಾಳಿ ಬೀಸುತ್ತಿದೆ. ರಾತ್ರಿ ಹೊತ್ತು ಸ್ವಲ್ಪ ಹೆಚ್ಚು ಚಳಿ ಇರುತ್ತದೆ. ಒಂದೇ ದಿನದಲ್ಲಿ ಹವಾಮಾನ ಬದಲಾಗಿದೆ,” ಎಂದು ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಇಳಿಕೆಯಾದ ತಾಪಮಾನ

ಹಿಂದಿನ ದಿನ ನಗರದಲ್ಲಿ ಇದ್ದ ತಾಪಮಾನ ಸರಾಸರಿ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಭಾನುವಾರ 28 ರಿಂದ 29 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಸೋಮವಾರ ನಗರದ ಕೇಂದ್ರಭಾಗದಲ್ಲಿ 26.7 ಡಿಗ್ರಿ ಸೆಲ್ಸಿಯಸ್‌, ಎಚ್‌ಎಎಲ್‌ನಲ್ಲಿ 25.3 ಡಿಗ್ರಿ ಸೆಲ್ಸಿಯಸ್‌ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 25 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

 

Comments are closed.