ಕರ್ನಾಟಕ

50ಕ್ಕೇರಿದ ಪಟಾಕಿ ಗಾಯಾಳುಗಳ ಸಂಖ್ಯೆ

Pinterest LinkedIn Tumblr


ಬೆಂಗಳೂರು: ರಾಜಧಾನಿಯಲ್ಲಿ ದೀಪಾವಳಿ ಸಡಗರದಲ್ಲಿ ಪಟಾಕಿ ಸಿಡಿತದಿಂದ ಉಂಟಾದ ಅನಾಹುತದಲ್ಲಿ ಗಾಯಗೊಂಡವರ ಸಂಖ್ಯೆ ಶುಕ್ರವಾರ 50ಕ್ಕೆ ಏರಿದೆ. ಪಟಾಕಿ ಸಿಡಿತದಿಂದ ಮಕ್ಕಳು ಸೇರಿ 50 ಮಂದಿ ಗಾಯಗೊಂಡಿದ್ದು, ಪೈಕಿ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿದ್ದುಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಗಂಭೀರವಾಗಿ ಗಾಯಗೊಂಡಿದ್ದ 7 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದು, 25 ವರ್ಷದ ಯುವಕ ಹಾಗೂ 10 ವರ್ಷದ ಬಾಲಕ ದೃಷ್ಟಿ ಕಳೆದುಕೊಂಡಿದ್ದಾರೆ. ಉಳಿದಂತೆ 11 ಮಂದಿ ಸಣ್ಣಪುಟ್ಟ ಗಾಯಗಳಿಂದಾಗಿ ಹೊರರೋಗಿ ಚಿಕಿತ್ಸಾಘಟಕದಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಮನೆಗೆ ಹಿಂದಿರುಗಿದ್ದಾರೆ.

ಹಾಗೇ ನಾರಾಯಣ ನೇತ್ರಾಲಯದ ನಾಲ್ಕು ಶಾಖಾ ಆಸ್ಪತ್ರೆಗಳಲ್ಲಿ 31 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಾರಾಯಣ ನೇತ್ರಾಲಯದ ರಾಜಾಜಿನಗರದ ಶಾಖಾ ಆಸ್ಪತ್ರೆಯಲ್ಲಿ 20 ಮಂದಿ ಚಿಕಿತ್ಸೆಗೆ ದಾಖಲಾಗಿದ್ದರು, ಈ ಪೈಕಿ 63 ವರ್ಷದ ಮಹಿಳೆಯೊಬ್ಬರು ಗಂಭೀರಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಉಳಿದಂತೆ ಜಯನಗರ ನೇತ್ರಧಾಮದಲ್ಲಿ ಮೂವರು, ಶಂಕರ ಕಣ್ಣಿನ ಆಸ್ಪತ್ರೆ ಸೇರಿ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.
“ಕೂಲಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕಣ್ಣು ಕಳೆದುಕೊಂಡಿದ್ದ ಮಗ’ “ಹಬ್ಬದ ದಿನ ಬೆಳಗ್ಗೆ ಮಗನಿಗೆ ಕಾಸುಕೊಟ್ಟು ಬೇಗ ಬಂದುಬಿಟಿವಿ ಅಂತಾ ಗಾರೆ ಕೆಲಸಕ್ಕೆ ಹೋಗಿದ್ವಿ.

ಸಂಜೆ ನಾಲ್ಕೂವರೆಗೆ ಮನೆ ತಲುಪಬೇಕು ಎನ್ನುವಷ್ಟರಲ್ಲಿ ಮಗ ಸುಧಾಕರ (10) ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಗಾಯಮಾಡಿಕೊಂಡಿದ್ದಾನೆ ಎಂದು ದಾರಿಮಧ್ಯೆಯೇ ಪಕ್ಕದ ಮನೆಯ ವ್ಯಕ್ತಿ ತಿಳಿಸಿದಾಗ ದಿಕ್ಕುತೋಚಂದಾಯಿತು” ಎಂದು ಪೆನಗೊಂಡ ಮೂಲದ ನರಸಿಂಹಯ್ಯ ಮಗನ ದುಸ್ಥಿತಿಯ ಬಗ್ಗೆ ಮರುಗಿದ ಪರಿಯಿದು.

ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕನಿಗೆ ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು, ಎಡಗಣ್ಣು ದೃಷ್ಟಿ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದನ್ನು ಕೇಳಿ ಹೆತ್ತವರ ದುಃಖದ ಕಟ್ಟೆಯೊಡೆದಿತ್ತು. ಈ ನೋವಿನ ನಡುವೆಯೇ ಸುಧಾಕರ್‌ ಸೋದರಮಾವ ಮುನಿರಾಜುರನ್ನು ಘಟನೆ ಬಗ್ಗೆ ” ಉದಯವಾಣಿ’ ಮಾತನಾಡಿಸಿದಾಗ ಗದ್ಗತಿತರಾಗಿ ನೋವು ತೋಡಿಕೊಂಡರು.

“ನಮ್ಮದು ಪೆನುಗೊಂಡ ತಾಲೂಕಿನ ಚೊಳುಕೂರು ಗ್ರಾಮ ಸಾರ್‌, ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನೆರೆ-ಹೊರೆ ಮಕ್ಕಳ ಜೊತೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದ. ಊದುಕಡ್ಡಿಯಿಂದ ಪಟಾಕಿ ಮೊನೆ ಸುಟ್ಟಿದ್ದ ಸುಧಾಕರ್‌, ಎಷ್ಟೊತ್ತಿಗೂ ಸ್ಫೋಟಿಸದಿದ್ದರಿಂದ ಹತ್ತಿರ ಹೋಗಿ ಬಗ್ಗಿದ್ದಾನೆ. ದುರಾದೃಷ್ಟವಶಾತ್‌ ಅದೇ ವೇಳೆ ಪಟಾಕಿ ಢಂ ಎಂದು ಸಿಡಿದಿದೆ. ಪರಿಣಾಮ ಸುಧಾಕರ್‌ ಎಡಭಾಗದ ಕೆನ್ನೆ ಹಾಗೂ ಕಣ್ಣಿಗೆ ಗಂಭೀರ ಪೆಟ್ಟಾಗಿದೆ.

ಸ್ಥಳೀಯರು ಎತ್ತಿಕೊಂಡು ಕೆಲನಿಮಿಷ ಆರೈಕೆ ಮಾಡಿದ್ದಾರೆ. ನಂತರ ಬಂದ ಪೋಷಕರು ಹಾಗೂ ನಾನು ಮೊದಲು ಹಿಂದೂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಡರಾತ್ರಿ ಮಿಂಟೋ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದೇವೆ. ಶುಕ್ರವಾರ ಸುಧಾಕರ್‌ ಕಣ್ಣಿಗೆ ಶಸ್ತ್ರಚಿಕಿತ್ಸೆ ನೀಡಿರುವ ವೈದ್ಯರು, ದೃಷ್ಟಿ ಬರುವ ಸಾಧ್ಯತೆ ತೀರಾ ಕಡಿಮೆ ಎಂದಿದ್ದಾರೆ ಎನ್ನುತ್ತಲೇ ಕೆನ್ನೆಮೇಲೆ ಜಾರುತ್ತಿದ್ದ ಕಣ್ಣೀರು ಒರೆಸಿಕೊಂಡರು.

ಮನೆ ಮಾಲೀಕರ ಮಕ್ಕಳ ಸಂಭ್ರಮ ನೋಡಲು ಹೋಗಿ ಎಡವಟ್ಟು!: ದೀಪಾವಳಿ ಹಬ್ಬಕ್ಕೆ ದೊಡ್ಡಮ್ಮನ ಮನೆಗೆ ಬಂದಿದ್ದ ರಾಜೇಶ್‌ (10) ದೊಡ್ಡಮ್ಮ ಕೆಲಸ ಮಾಡುವ ಮನೆ ಮಾಲೀಕರ ಮಕ್ಕಳು ಪಟಾಕಿ ಸಿಡಿಸುತ್ತಿದ್ದ ವೇಳೆ ತಾನೂ ಪಾಲ್ಗೊಂಡು ಎಡಗಣ್ಣಿಗೆ ಗಂಭೀರ ಗಾಯಮಾಡಿಕೊಂಡಿದ್ದು, ಕೂಡಲೇ ಆತನನ್ನು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವಿದ್ಯಾರಣ್ಯಪುರದಲ್ಲಿ ತಾಯಿ ಜೊತೆ ವಾಸಿಸುತ್ತಿರುವ ರಾಜೇಶ್‌, ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳ ಹಿಂದೆ ದೊಡ್ಡಬಾಣಸವಾಡಿಯ ಅಂಜನಪ್ಪ ಲೇಔಟ್‌ನ ದೊಡ್ಡಮ್ಮನ ಮನೆಗೆ ಬಂದಿದ್ದ. ಶುಕ್ರವಾರ ಎಂದಿನಂತೆ ದೊಡ್ಡಮ್ಮ ಮನೆಕೆಲಸಕ್ಕೆ ತೆರಳಿದಾಗ ಹಠ ಮಾಡಿ ಅವರ ಜೊತೆ ತೆರಳಿದ್ದ. ಬೆಳಗ್ಗೆ 10.30ಕ್ಕೆ ಮನೆಯ ಮಾಲೀಕರ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು.

ಈ ವೇಳೆ ಅವರ ಜೊತೆ ಸೇರಿಕೊಂಡಿದ್ದ. ಪಟಾಕಿಯೊಂದಕ್ಕೆ ಹಚ್ಚಿದ್ದ ಬೆಂಕಿ ತಾಕಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಹತ್ತಿರ ತೆರಳಿದಾಗ, ಸಿಡಿದ ಪಟಾಕಿ ಕಿಡಿ ರಾಜೇಶ್‌ ಎಡಗಣ್ಣಿಗೆ ತಾಕಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್‌ನನ್ನು ಮೂರ್‍ನಾಲ್ಕು ಆಸ್ಪತ್ರೆಗಳಲ್ಲಿ ತೋರಿಸಲಾಯಿತು. ಆದರೆ, ಅಲ್ಲಿನ ವೈದ್ಯರು ಮಿಂಟೋಗೆ ಶಿಫಾರಸು ಮಾಡಿದರು, ಸದ್ಯ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಗಾಯಾಳು ಸಂಬಂಧಿ ರವಿಕಾ ಕೃಷ್ಣಮೂರ್ತಿ ಹೇಳುವಾಗ ಕಣ್ಣಾಲಿಗಳು ತೇವಗೊಂಡವು.

“ಒಬ್ಬನೇ ಮಗನನ್ನು ಖಾಸಗಿ ಶಾಲೆಯಲ್ಲಿ ಇಂಗ್ಲಿಷ್‌ ಮೀಡಿಯಂನಲ್ಲಿ ಕೂಲಿ ಮಾಡಿ ಓದಿಸುತ್ತಿದ್ದೇನೆ. ಆದರೆ, ದೇವರು ಹಬ್ಬದ ಸಂಭ್ರಮದಲ್ಲಿ ಹೀಗೆ ಮಾಡಿಬಿಟ್ಟ. ನಿನ್ನೆಯೂ, ಕೆಲಸಕ್ಕೆ ಹೋಗಿದ್ದೆ ಮಧ್ಯಾಹ್ನ ಅಕ್ಕನ ಮಕ್ಕಳು ವಿಷಯ ಹೇಳಿದ ಮೇಲೆ ಜೀವವೇ ನಿಂತು ಹೋದಂತಾಯ್ತು. ಅಲ್ಲಿಂದ ಮಿಂಟೋ ಆಸ್ಪತ್ರೆಗೆ ಬಂದಿದ್ದೇನೆ. ಇದ್ದ ಒಬ್ಬ ಮಗನಿಗೆ ಹೀಗಾಗಬೇಕಾ ಎಂದು ರಾಜೇಶ್‌ ತಾಯಿ ಲಲಿತಾ ನೋವು ತೋಡಿಕೊಂಡರು.

ನಡೆದುಕೊಂಡು ಹೋಗುವಾಗ ಸುಟ್ಟಿತು ಕಣ್ಣು!: ಅಸ್ಸಾಂ ಮೂಲದ ಹುಸೇನ್‌ ಮಹಮದ್‌ ( 25) ಗುರುವಾರ ರಾತ್ರಿ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೇಲಿನಿಂದ ಬಿದ್ದ ಪಟಾಕಿ ಕಿಡಿ ಅವರ ಕಣ್ಣಿಗೆ ತಾಕಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ನೇಹಿತರು ಮಿಂಟೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಸೇನ್‌ಗೆ ಚಿಕಿತ್ಸೆ ನೀಡಲಾಗಿದ್ದು ಎರಡರಿಂದ ಮೂರು ದಿನದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹುಸೇನ್‌ ಸ್ನೇಹಿತ ಫ‌ಯಾಜ್‌ ತಿಳಿಸಿದರು.

ಪಟಾಕಿ ಸಿಡಿಸಲು ಹೋಗಿ ಗಾಯ!: ಕೋರಮಂಗಲದಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಒಡಿಶಾ ಮೂಲದ ತಪನ್‌ ಕುಮಾರ್‌ (25) ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಪೆಟ್ಟುಮಾಡಿಕೊಂಡಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು, ಅಷ್ಟೇನೂ ಗಂಭೀರ ಪ್ರಮಾಣದಲ್ಲಿ ಗಾಯವಾಗಿಲ್ಲ ದೃಷ್ಟಿದೋಷ ಸರಿಹೋಗಲಿದೆ ಎಂದು ತಿಳಿಸಿದ್ದಾರೆ.

-ಉದಯವಾಣಿ

Comments are closed.