ಕರ್ನಾಟಕ

ವರುಣನ ಕೃಪೆ: 2,000 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಇಳಿಕೆ

Pinterest LinkedIn Tumblr


ಬೆಂಗಳೂರು: ರಾಜ್ಯಾದ್ಯಂತ ಕಳೆದ ಎರಡು ತಿಂಗಳಿನಿಂದ ಸುರಿದ ವರ್ಷಧಾರೆಯಿಂದಾಗಿ ವಿದ್ಯುತ್‌ ಬೇಡಿಕೆ ಸುಮಾರು 1,500ರಿಂದ 2,000 ಮೆಗಾವ್ಯಾಟ್‌ನಷ್ಟು ಕುಸಿದಿದ್ದು, ವಿದ್ಯುತ್‌ ಖರೀದಿಗೆ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.

ರಾಜ್ಯದಲ್ಲಿ ಈ ಬಾರಿ ಮುಂಗಾರು ಆರಂಭದಲ್ಲಿ ಕ್ಷೀಣಿಸಿತ್ತು. ಇದರಿಂದ ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆಯಾಗದ ಕಾರಣ ಉತ್ಪಾದನೆ ಕುಸಿದು ವಿದ್ಯುತ್‌ ಕ್ಷಾಮ ತಲೆದೋರುವ ಆತಂಕ ಎದುರಾಗಿತ್ತು. ಹೀಗಾಗಿ ಜುಲೈನಲ್ಲೇ ವಿದ್ಯುತ್‌ ಖರೀದಿ ಮಾತು ಕೇಳಿಬಂದಿತ್ತು. ಸರಕಾರ ಕೂಡ ಸೆಪ್ಟಂಬರ್‌ನಿಂದ 2018ರ ಮೇವರೆಗೆ ವಿದ್ಯುತ್‌ ಖರೀದಿಗೆ ಜುಲೈನಲ್ಲೇ ಒಪ್ಪಿಗೆ ಸೂಚಿಸಿತ್ತು. ಅದರಂತೆ ಪವರ್‌ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್‌ (ಪಿಸಿಕೆಎಲ್‌) ಸಂಸ್ಥೆಯು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಈ ನಡುವೆ ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯಲಾರಂಭಿಸಿದ ಬಳಿಕ ವಿದ್ಯುತ್‌ ಬೇಡಿಕೆ ಕುಸಿಯಲಾರಂಭಿಸಿತು. ಆಗಾಗ್ಗೆ ಕೆಲವು ದಿನ ಬಿಡುವು ನೀಡಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು, ನಿರಂತರ ಮಳೆಯಿಂದಾಗಿ ಕೃಷಿ ಪಂಪ್‌ಸೆಟ್‌ಗಳ ಬಳಕೆಯೂ ಕಡಿಮೆಯಾಗಿದೆ. ಕಳೆದ ಆಗಸ್ಟ್‌ನಲ್ಲೇ ವಿದ್ಯುತ್‌ ಬೇಡಿಕೆ 9000 ಮೆಗಾವ್ಯಾಟ್‌ಗೆ ತಲುಪಿತ್ತು. ಆದರೆ ಅನಂತರ ಮಳೆ ಸುರಿಯಲಾರಂಭಿಸಿದ್ದರಿಂದ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಇಳಿಕೆಯಾಗಿದೆ. ಇಂಧನ ಇಲಾಖೆಗೆ ವರದಾನವಾಗಿ ಪರಿಣಮಿಸಿದೆ.

2ತಿಂಗಳಿನಿಂದೀಚೆಗೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ 1,500 ಮೆಗಾವ್ಯಾಟ್‌ನಿಂದ 2,000 ಮೆಗಾವ್ಯಾಟ್‌ನಷ್ಟು ಕುಸಿದಿದೆ. ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ವಿದ್ಯುತ್‌ ಬೇಡಿಕೆ 9,000 ಮೆಗಾವ್ಯಾಟ್‌ ಮೀರುತ್ತಿತ್ತು. ಆದರೆ ಸದ್ಯ 7,000 ಮೆಗಾವ್ಯಾಟ್‌ ಬೇಡಿಕೆಯಷ್ಟೇ ಇದೆ. ಸದ್ಯ ಪೂರೈಕೆ ಗಿಂತಲೂ ಬೇಡಿಕೆ ಕಡಿಮೆ ಇದೆ ಎಂದು ಕೆಪಿಟಿಸಿಎಲ್‌ ನಿರ್ದೇಶಕ (ತಾಂತ್ರಿಕ) ನಾಗೇಶ್‌ ತಿಳಿಸಿದರು.

ಸದ್ಯದಲ್ಲೇ ಸಭೆ
2017ರ ಮೇವರೆಗೆ ನಿತ್ಯ 1,000 ವಿದ್ಯುತ್‌ ಖರೀದಿ ಸಂಬಂಧ ಪಿಸಿಕೆಎಲ್‌ ನಿಗಮವು ಟೆಂಡರ್‌ ಪ್ರಕ್ರಿಯೆ ನಡೆಸಿ ವಿವರಗಳನ್ನು ಸಲ್ಲಿಸಿದೆ. ಸದ್ಯ ಉತ್ತಮ ಮಳೆಯಿಂದಾಗಿ ರಾಜ್ಯಾದ್ಯಂತ ವಿದ್ಯುತ್‌ ಬೇಡಿಕೆ ತಗ್ಗಿರುವ ಕಾರಣ ಚರ್ಚೆ ನಡೆಸಿಲ್ಲ. ಸದ್ಯದಲ್ಲೇ ಸಭೆ ನಡೆಸಿ ಚರ್ಚಿಸಲಾಗುವುದು. ಜಲಾಶಯಗಳಲ್ಲಿ ನೀರಿನ ಮಟ್ಟ, ಉಷ್ಣ ವಿದ್ಯುತ್‌, ಪವನ ವಿದ್ಯುತ್‌ ಉತ್ಪಾದನೆ ಸೇರಿದಂತೆ ಪರಿಸ್ಥಿತಿ ಅವಲೋಕಿಸಿ ಖರೀದಿ ಪ್ರಮಾಣವನ್ನು ನಿಗದಿಪಡಿಸಲಾಗುವುದು. ಖರೀದಿ ಯಾವಾಗ ಆರಂಭವಾದರೂ ಮೇ 31ರವರೆಗಷ್ಟೇ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.

-udayavani

Comments are closed.