ಕರ್ನಾಟಕ

ಯಾವುದೀ ಮಸೀದಿ …! ಗಮನ ಸೆಳೆಯುತ್ತಿದೆ ‘ಮಾರ್ಚ್-22 ‘ ಚಿತ್ರೀಕರಣ; ನಿರೀಕ್ಷೆಯಲ್ಲಿ ಜನ

Pinterest LinkedIn Tumblr

ಬೆಳಗಾವಿ: ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಹರೀಶ್ ಶೇರಿಗಾರ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಮಾರ್ಚ್-22 ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದ ಬಗ್ಗೆ ಜನ ಕಾತುರದಲ್ಲಿದ್ದಾರೆ. ವಿಶೇಷ ಚಿತ್ರಕತೆ ಹೊಂದಿರುವ ಈ ಸಿನೆಮಾ ಜನರಲ್ಲಿ ನಿರೀಕ್ಷೆಯನ್ನು ಮೂಡಿಸಿದೆ.

ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ಹೊಸಾ ಚಿತ್ರ ‘ಮಾರ್ಚ್-22 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ಚಚಡಿ ನಾಗರಾಜ ದೇಸಾಯಿಯವರ ವಾಡೆ ಮನೆಯಲ್ಲಿ ಮುಹೂರ್ತ ಸಮಾರಂಭ ನೆರವೇರಿಸಿಕೊಂಡಿದ್ದ ಈ ಚಿತ್ರ ತಂಡ ಇದೀಗ ಬೈಲಹೊಂಗಲದ ಚಚಡಿಯಲ್ಲಿ ಬೀಡು ಬಿಟ್ಟಿದೆ. ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ಹರೀಶ್ ಶೇರಿಗಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಚಡಿಯಲ್ಲಿಯೇ ಈ ಚಿತ್ರದ ಕಲಾ ನಿರ್ದೇಶಕರಾದ ವಸಂತರಾವ್ ಎಂ ಕುಲಕರ್ಣಿಯವರು ನಿರ್ಮಿಸಿರುವ ಮಸೀದಿಯ ಸೆಟ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಸಹಜತೆಗೇ ಸೆಡ್ಡು ಹೊಡೆಯುವಂತಿರುವ ಈ ಮಸೀದಿಯ ಸೆಟ್ ಅನ್ನು ಕುಲಕರ್ಣಿಯವರು ತಮ್ಮ ತಂಡದ ಜೊತೆ ಭಾರೀ ಶ್ರಮ ವಹಿಸಿ ನಿರ್ಮಿಸಿದ್ದಾರೆ.

ಈ ಚಿತ್ರದ ಟೈಟಲ್ ನೋಡಿದರೇನೇ ನಿರ್ದೇಶಕ ಕೊಡ್ಲು ರಾಮಕೃಷ್ಣ ಅವರು ಭಿನ್ನವಾದೊಂದು ಕಥೆಯಿಟ್ಟುಕೊಂಡು ಅಖಾಡಕ್ಕಿಳಿದಿದ್ದಾರೆಂಬ ವಿಚಾರ ಸ್ಪಷ್ಟವಾಗುತ್ತದೆ. ‘ಮಾರ್ಚ್-22′ ಇಡೀ ಜಗತ್ತಿಗೆ ಒಂದು ರೀತಿಯಲ್ಲಿ ವಿಶೇಷ ದಿನ. ಯಾಕೆಂದರದು ಜಲ ದಿನ ಎಂದು ಆಚರಿಸಲ್ಪಡುತ್ತದೆ. ಈ ದಿನವನ್ನೇ ಚಿತ್ರದ ಟೈಟಲ್ ಆಗಿ ಬಳಸಿಕೊಂಡಿರೋದರ ಹಿಂದೆಯೂ ನಿಖರವಾದ ಕಾರಣಗಳಿವೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ವಿದೇಶದಲ್ಲಿ ನೆಲೆಸಿರುವ ಹರೀಶ್ ಶೇರಿಗಾರ್ ಈ ಚಿತ್ರವನ್ನು ತಮ್ಮ ಡ್ರೀಮ್ ಪ್ರಾಜೆಕ್ಟ್ ಆಗಿ ಪರಿಗಣಿಸಿ ನಿರ್ಮಿಸುತ್ತಿದ್ದಾರೆ.

ನೀರಲ್ಲಿಯೂ ಜಾತಿ ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥಾದ್ಯಾವ ಕಟ್ಟು ಪಾಡುಗಳೂ ಇಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥಾದ್ದೇ ಜೀವಪರ ಆಶಯವುಳ್ಳ ಕಥೆ ಹೊಂದಿರುವ ಈ ಚಿತ್ರಕ್ಕೆ ಈ ಹೆಸರಲ್ಲದೇ ಬೇರ‍್ಯಾವುದೂ ಸರಿ ಹೊಂದಲಿಕ್ಕಿಲ್ಲ. ಈ ಚಿತ್ರದಲ್ಲಿ ಅನಂತ್ ನಾಗ್, ಗೀತಾ, ಅಶೀಷ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ, ಜೈಜಗದೀಶ್, ವಿನಯಾ ಪ್ರಸಾದ್, ಆರ್ಯವರ್ಧನ್, ಕಿರಣ್ ರಾಜ್, ಮೇಘಶ್ರೀ, ಪದ್ಮಜಾರಾವ್ ಸಾಧು ಕೋಕಿಲಾ, ಯುವ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಮಂಗಳೂರಿನ ದೀಪ್ತಿ ಶೆಟ್ಟಿ, ಪ್ರಶೋಭಿತ  ಮುಂತಾದವರು ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಹಾಗು ರವಿಶಂಕರ್ ಸಂಗೀತ ನೀಡಿದ್ದಾರೆ.

ಅಂದಹಾಗೆ ಮಾರ್ಚ್-22 ಚಿತ್ರಕ್ಕಾಗಿ ನೈಜವೆನಿಸುವ ಸೆಟ್ ನಿರ್ಮಿಸಿರುವ ವಸಂತ ರಾವ್ ಕುಲಕರ್ಣಿ ಸಿನಿಮಾದ ಯಾವುದೇ ವಿಭಾಗಗಳಲ್ಲೂ ಕಾರ್ಯನಿರ್ವಹಿಸುವ ಪ್ರತಿಭೆ. ಅನೇಕ ಸಿನಿಮಾಗಳ ನಿರ್ಮಾಣ ಜವಾಬ್ದಾರಿಯನ್ನೂ ನಿರ್ವಹಿಸಿರುವ ಕುಲಕರ್ಣಿ ಧಾರಾವಾಹಿಗಳಿಗೂ ಸೆಟ್ ನಿರ್ಮಿಸಿದ್ದಾರೆ. ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ರಾಮಾಯಣ ಮಹಾಭಾರತದಂತ ಮೆಘಾ ಸೀರಿಯಲ್ಲುಗಳ ಮೋಹಕ ಸೆಟ್ ಗಳನ್ನು ನಿರ್ಮಿಸಿದ್ದು ಕೂಡಾ ಇವರೇ. ಕನ್ನಡದಲ್ಲಿ ಬರುತ್ತಿದ್ದ ಮಹಾಭಾರತದ ಸೆಟ್ ಅದ್ಯಾವ ಪರಿ ನೈಜವಾಗಿ ಮೂಡಿಬಂದಿತ್ತೆಂದರೆ, ತಮಿಳಿನ ಧಾರಾವಾಹಿಗೂ ಕೂಡಾ ಕುಲಕರ್ಣಿ ಅವರು ನಿರ್ಮಿಸಿದ ಸೆಟ್ ಗಳನ್ನೇ ಬಳಸಿಕೊಳ್ಳಲಾಗಿತ್ತು.

ಬರೀ ಸಿನಿಮಾ ಮಾತ್ರವಲ್ಲದೆ, ಇತರೆ ಸಮಾರಂಭಗಳಿಗೂ ಭವ್ಯವಾದ ಸೆಟ್ ಗಳಮೂಲಕ ಕನಸಿನ ಲೋಕವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಅಪ್ರತಿಮ ಕಲಾವಿದ ವಸಂತರಾವ್ ಎಂ. ಕುಲಕರ್ಣಿ. ತೀರಾ ಇತ್ತೀಚೆಗೆ ಮಲ್ಲೇಶ್ವರಂನ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗಂಗಾ ನದಿಯಿಂದ 25 ಸಾವಿರ ಲೀಟರ್ ನೀರನ್ನು ತರಿಸಿ ಗಂಗಾರತಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಲ್ಲೇಶ್ವಂನ 8ನೇ ಕ್ರಾಸ್ ನ ಕಿಷ್ಕಿಂದೆಯಂಥಾ ರಸ್ತೆಯಲ್ಲೇ ಹಿನ್ನೆಲೆಯಲ್ಲಿ ಹಿಮಾಲಯ, ಸುತ್ತ ಕಾಶಿನಗರ ಮತ್ತು ಮಧ್ಯದಲ್ಲಿ ಈಶ್ವರನನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಭವ್ಯ ವಿನ್ಯಾಸವನ್ನು ನೋಡಲೆಂದೇ ಲಕ್ಷಾಂತರ ಜನ ಆಗಮಿಸಿದ್ದರು. ಆ ಸೆಟ್ ಅನ್ನು ನಿರ್ಮಿಸಿದ್ದು ಕೂಡಾ ಇದೇ ಕುಲಕರ್ಣಿ. ಸೆಟ್ ಗಳಿಗಾಗಿ ಹೈದ್ರಾಬಾದಿಗೆ ಹೋಗಿದ್ವಿ, ಚೆನ್ನೈನಲ್ಲಿ ಶೂಟ್ ಮಾಡಿದ್ವಿ ಅಂತೆಲ್ಲಾ ಹೇಳುವ ನಮ್ಮ ಗಾಂಧಿನಗರದ ಮಂದಿ ಕುಲಕರ್ಣಿ ಅವರಂತ ಪ್ರತಿಭಾವಂತರ ಕೈಗೆ ಜವಾಬ್ದಾರಿ ವಹಿಸಿದರೆ ಯಾವುದನ್ನು ಬೇಕಾದರೂ ಸಹಜವಾಗಿ ಸೃಷ್ಟಿಸಬಲ್ಲರು ಅನ್ನೋದಕ್ಕಿದು ಉದಾಹರಣೆಯಷ್ಟೆ.

Comments are closed.