ಕರ್ನಾಟಕ

ಸಂಸದ ಅನಂತಕುಮಾರ್‌ ಹೆಗಡೆಯಿಂದ ವೈದ್ಯರ ಮೇಲೆ ಹಲ್ಲೆ! ರಾಜೀ ಸಂಧಾನ…

Pinterest LinkedIn Tumblr

anantha-kumar
ಶಿರಸಿ: ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಹಿನ್ನೆಲೆ: ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದ ಸಂಸದರ ತಾಯಿಯನ್ನು ಇಲ್ಲಿನ ಟಿಎಸ್ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು. ವೈದ್ಯರು ಪರೀಕ್ಷಿಸಿ ಕಾಲು ಮುರಿದಿದೆ ಎಂದು ತಿಳಿಸಿ ಇನ್ನೊಂದು ರೋಗಿಯ ಶಸ್ತ್ರಚಿಕಿತ್ಸೆಗೆ ಹೋಗಿದ್ದರು ಎನ್ನಲಾಗಿದೆ.

ರಾತ್ರಿ ಸುಮಾರು ೧೧ಕ್ಕೆ ಆಸ್ಪತ್ರೆಗೆ ಬಂದ ಅನಂತಕುಮಾರ ಹೆಗಡೆ ‘ಸಂಸದರ ತಾಯಿಯ ಚಿಕಿತ್ಸೆಗೇ ಸರಿಯಾಗಿ ಸ್ಪಂದಿಸದ ನೀವು ಜನಸಾಮಾನ್ಯರಿಗೆ ಇನ್ನೇನು ಮಾಡಬಲ್ಲಿರಿ’ ಎಂದು ವೈದ್ಯರ ಮೇಲೆ ಹರಿಹಾಯ್ದರು. ನಂತರ ಮೂವರ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ಎಲುಬು ಕೀಲು ತಜ್ಞ ಡಾ.ಮಧುಕೇಶ್ವರ ಅವರ ತುಟಿಗೆ ಪೆಟ್ಟಾಗಿದೆ. ಡ್ಯೂಟಿ ಡಾಕ್ಟರ್ ಡಾ. ಬಾಲಚಂದ್ರ ಭಟ್ಟ ಮತ್ತು ಸ್ವಾಗತಕಾರ ರಾಹುಲ್ ಅವರಿಗೆ ಸಂಸದರು ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.

ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.

ನಗರದ ವೈದ್ಯರೆಲ್ಲ ಸೇರಿ ಮಧ್ಯರಾತ್ರಿ ದಿಢೀರ್ ಸಭೆ ನಡೆಸಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದರು.

ನಂತರದ ಬೆಳವಣಿಗೆಯಲ್ಲಿ ಟಿಎಸ್ಎಸ್ ಆಸ್ಪತ್ರೆ ಅಧ್ಯಕ್ಷ ಶಾಂತಾರಾಮ ಹೆಗಡೆ, ಎಲ್ಲ ವೈದ್ಯರು, ಸಂಸದರ ಉಪಸ್ಥಿತಿಯಲ್ಲಿ ರಾಜೀ ಸಂಧಾನ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

Comments are closed.