ಕರ್ನಾಟಕ

ಮೂಸಂಬಿ, ಬಿರಿಯಾನಿ ಪೊಟ್ಟಣಗಳಲ್ಲಿ ಗಾಂಜಾ ತುಂಬಿಸಿ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಮೂವರು ಯುವಕರನ್ನು ಬಂಧಿಸಿದ ಪೊಲೀಸರು

Pinterest LinkedIn Tumblr

mosambi

ಬೆಂಗಳೂರು: ಮೂಸಂಬಿ ಹಣ್ಣು, ಬಿರಿಯಾನಿ ಪೊಟ್ಟಣಗಳಲ್ಲಿ ಗಾಂಜಾ ತುಂಬಿ, ಅದನ್ನು ಜೈಲಿನಲ್ಲಿರುವ ಸ್ನೇಹಿತರಿಗೆ ತಲುಪಿಸುವ ಯತ್ನದಲ್ಲಿದ್ದ ಮೂವರು ಯುವಕರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರವೇಶ ದ್ವಾರದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮೂಸಂಬಿ ಪ್ರಕರಣ: ‘ಬಾಪೂಜಿನಗರ ನಿವಾಸಿಗಳಾದ ಸಂಜಯ್ (20) ಹಾಗೂ ನವೀನ್ (26) ಎಂಬುವರು, ನ್ಯಾಯಾಂಗ ಬಂಧನದಲ್ಲಿರುವ ಗೆಳೆಯ ಅಶೋಕ್‌ನಿಗೆ ಗಾಂಜಾ ಕೊಡಲು ಡಿ.5ರಂದು ಜೈಲಿನ ಬಳಿ ಬಂದಿದ್ದರು. ಅವರನ್ನು ಬಂಧಿಸಿ, 402 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಆರೋಪಿ ಕುಮಾರ್ ತಲೆಮರೆಸಿಕೊಂಡಿದ್ದಾನೆ’ ಎಂದು ಪರಪ್ಪನ ಅಗ್ರಹಾರ ಪೊಲೀಸರು ಹೇಳಿದರು. ಕುಮಾರ್‌ನಿಂದ ಗಾಂಜಾ ತೆಗೆದುಕೊಂಡಿದ್ದ ಬಂಧಿತರು, ಅದನ್ನು ಮೂಸಂಬಿ ಹಣ್ಣಿನಲ್ಲಿ ತುಂಬಿದ್ದರು. ಸಿಪ್ಪೆ ಸುಲಿದು ಹಣ್ಣಿನ ತಿರುಳನ್ನು ಹೊರ ತೆಗೆದಿದ್ದ ಅವರು, ನಂತರ ಅದರಲ್ಲಿ ಗಾಂಜಾ ತುಂಬಿ ಫೆವಿಕ್ವಿಕ್ ಗಮ್‌ನಿಂದ ಪುನಃ ಸಿಪ್ಪೆ ಮುಚ್ಚಿದ್ದರು.

ಅದನ್ನು ತೆಗೆದುಕೊಂಡು ಬೆಳಿಗ್ಗೆ 11.30ರ ಸುಮಾರಿಗೆ ಜೈಲಿನ ಬಳಿ ಹೋದ ಅವರು, ಅಶೋಕ್‌ಗೆ ಹಣ್ಣು ಕೊಡಬೇಕೆಂದು ಹೇಳಿದ್ದರು. ಸಿಪ್ಪೆಯ ಮೇಲಿದ್ದ ಗಮ್‌ಕಲೆ ನೋಡಿದ ಸಿಬ್ಬಂದಿ, ಅನುಮಾನದಿಂದ ಸಿಪ್ಪೆ ಸುಲಿದು ನೋಡಿದಾಗ ಗಾಂಜಾ ಪತ್ತೆಯಾಗಿದೆ. ಕೂಡಲೇ ಅವರನ್ನು ಹಿಡಿದುಕೊಂಡು ಪರಪ್ಪನ ಅಗ್ರಹಾರ ಠಾಣೆಗೆ ಒಪ್ಪಿಸಿದ್ದಾರೆ.

ಬಿರಿಯಾನಿ ಪ್ರಕರಣ: ಡಿ.7ರಂದು ಬಿರಿಯಾನಿ ಪೊಟ್ಟಣದಲ್ಲಿ ಗಾಂಜಾ ತುಂಬಿ ಜೈಲಿಗೆ ಹೊರಟಿದ್ದ ಸಂಜಯ್ ಅಲಿಯಾಸ್ ಸಂಜು ಎಂಬ ಇನ್ನೊಬ್ಬ ಚಾಲಕಿಯೂ ಪೊಲೀಸರ ಬಲೆಗೆ ಬಿದ್ದು ಕಾರಾಗೃಹದ ಅತಿಥಿಯಾಗಿದ್ದಾನೆ.

ಆಸ್ಟಿನ್‌ಟೌನ್ ನಿವಾಸಿಯಾದ ಸಂಜು, ಪೇಂಟರ್ ಆಗಿದ್ದಾನೆ. ಈತನ ಸ್ನೇಹಿತ ಅಭಿಲಾಷ್ ಜೈಲಿನಲ್ಲಿದ್ದಾನೆ. ಮಾದಕ ವ್ಯಸನಿಯಾದ ಆತ, ಇತ್ತೀಚೆಗೆ ತನ್ನನ್ನು ಭೇಟಿಯಾಗಲು ಬಂದಿದ್ದ ಸ್ನೇಹಿತರ ಬಳಿ ಗಾಂಜಾ ತಂದು ಕೊಡುವಂತೆ ಹೇಳಿದ್ದ. ವಿಷಯ ತಿಳಿದ ಸಂಜು, ಗೆಳೆಯನಿಗೆ ಗಾಂಜಾ ತಲುಪಿಸಲು ನಿರ್ಧರಿಸಿದ್ದ.

ಮೂರು ಪೊಟ್ಟಣಗಳಲ್ಲಿ 400 ಗ್ರಾಂ ಗಾಂಜಾ ತುಂಬಿದ್ದ ಸಂಜು, ಮೇಲೆ ಬಿರಿಯಾನಿ ಹಾಕಿ ಅದನ್ನು ಪ್ಯಾಕ್ ಮಾಡಿದ್ದ. ನಂತರ ಜೈಲಿಗೆ ಹೋಗಿ, ಸ್ನೇಹಿತನಿಗೆ ತಿಂಡಿಪಾರ್ಸೆಲ್ ತಂದಿರುವುದಾಗಿ ಹೇಳಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸಿಬ್ಬಂದಿ, ಪಾರ್ಸೆಲ್ ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಚೆಂಡಿನಲ್ಲಿ ತುಂಬುತ್ತಿದ್ದರು
‘ಮೊದಲೆಲ್ಲ ಮದ್ಯದ ಬಾಟಲಿ ಅಥವಾ ಪ್ಲಾಸ್ಟಿಕ್ ಚೆಂಡುಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ ರಸ್ತೆಯಿಂದ ಜೈಲಿನ ಆವರಣಕ್ಕೆ ಎಸೆಯುತ್ತಿದ್ದರು.

ಭದ್ರತೆ ಹೆಚ್ಚಾದ ಬಳಿಕ ಇಂಥ ಹೊಸ ತಂತ್ರಗಳನ್ನು ಹುಡುಕಿಕೊಂಡಿದ್ದಾರೆ. ಹಣ್ಣು, ಆಹಾರ ಸೇರಿದಂತೆ ಸಂದರ್ಶಕರು ತರುವ ಎಲ್ಲ ವಸ್ತುಗಳನ್ನು ಈಗ ಸೂಕ್ಷ್ಮವಾಗಿ ತಪಾಸಣೆ ನಡೆಸಲಾಗುತ್ತಿದೆ’ ಎಂದು ಕಾರಾಗೃಹ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

Comments are closed.