ಚಾಮರಾಜನಗರ. ನ. ೨- ಕುಟುಂಬ ನಿರ್ವಹಣೆಗೆ ಮಾಡಿದ ಸಾಲ ಬೆಟ್ಟದೆತ್ತರಕ್ಕೆ ಬೆಳೆದ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರು ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಲ್ಲುತ್ತೂರು ಗ್ರಾಮದಲ್ಲಿ ಇಡೀ ಕುಟುಂಬವೇ ಸಾವಿಗೆ ಶರಣಾದ ಘಟನೆ ನಡೆದಿದೆ.
ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಆನಂದ್ ಎಂಬಾತ ಮಾಡಿದ ಸಾಲ ಹೆಚ್ಚಾಗಿದ್ದು, ಸಾಲಗಾರರ ಕಿರುಕುಳದಿಂದ ಬೇಸತ್ತು, ಆನಂದ ತನ್ನ ಕುಟುಂಬದವರಿಗೆ ವಿಷ ನೀಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ ರಾತ್ರಿ ಆನಂದ ಮನೆಗೆ ಬಂದು ತನ್ನ ಪತ್ನಿ ಶೋಭಾ(25) ಮಕ್ಕಳಾದ ಮಂಟೇಸ್ವಾಮಿ(4) ಹಾಗೂ ಮಂಟೇ ಲಿಂಗಗೆ(2) ವಿಷ ನೀಡಿದ್ದು, ಅವರೆಲ್ಲರೂ ವಿಷ ಸೇವಿಸಿ ಸಾವಿನ ಬಾಗಿಲಿಗೆ ಹೋಗುವ ದೃಶ್ಯ ಕಂಡು ಹೆದರಿ ಕೈಯಲ್ಲಿ ವಿಷವನ್ನು ಹಿಡಿದು ಮನೆಯಿಂದ ಹೊರ ಹೊರಟನು.
ತನ್ನ ಕುಟುಂಬ ಇಲ್ಲದೇ ತನಗೇನು ಭವಿಷ್ಯವಿಲ್ಲ ಎನ್ನುತ್ತಾ ತಾನು ವಿಷ ಸೇವಿಸಿದನು. ನಂತರ ಈತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಆನಂದ ಮೃತಪಟ್ಟನು ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಆನಂದವಾಗಿರಬೇಕಾದ ಆನಂದನ ಕುಟುಂಬವು ಸಾಲದ ಬಾಧೆಗೆ ಕೊನೆಕಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.