ಧಾರವಾಡ(ಅ.01): ಆಡಳಿತದಲ್ಲಿ ಕನ್ನಡ ಭಾಷೆ ಬರಲಿ ಎನ್ನುವ ಮಾತು ಎಲ್ಲಾ ಕಡೆ ಕೇಳಿ ಬರುತ್ತದೆ. ನ್ಯಾಯಾಂಗದ ವಿಚಾರಕ್ಕೆ ಬಂದರೆ ಈ ಮಾತು ಇನ್ನಷ್ಟು ಜಟಿಲವಾಗುತ್ತದೆ. ಆದರೆ ಧಾರವಾಡದ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಕಾಲಾವಧಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲೇ ಬರೆದಿದ್ದಾರೆ. ಯಾರು ಅವರು ಅಂತೀರಾ? ಇಲ್ಲಿದೆ ವಿವರ.
ಕನ್ನಡ ಭಾಷೆ, ಕನ್ನಡ ನುಡಿ ಕುರಿತ ಮಾತು-ಚರ್ಚೆ ನವೆಂಬರ್ ಹೊತ್ತಲ್ಲಿ ಹೆಚ್ಚಾಗುತ್ತದೆ. ಆದರೆ, ಕಾರ್ಯ ರೂಪಕ್ಕೆ ತರುವವರು ಮಾತ್ರ ತೀರಾ ವಿರಳ ಮಂದಿ. ಅದರಲ್ಲೂ ಪರಭಾಷಾ ಹಾವಳಿಯಿಂದ ನ್ಯಾಯಾಂಗದ ಮೇಲೆ ಕನ್ನಡಮ್ಮನಿಗೆ ಸ್ಥಳವೇ ಇಲ್ಲವೇನೋ ಎನ್ನುವ ಮಟ್ಟಿಗೆ ಸಂಕಷ್ಟ ತಂದಿದೆ. ಆದರೆ, ಧಾರವಾಡದ ನಿವೃತ್ತ ನ್ಯಾಯಾಧೀಶರೊಬ್ಬರು ಆ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರೇ ಎಸ್. ಎಚ್. ಮಿಟ್ಟಲಕೋಡ.
ಇವರು ಕನ್ನಡದಲ್ಲೇ 2000ಕ್ಕೂ ಹೆಚ್ಚು ತೀರ್ಪುಗಳನ್ನು ಬರೆದಿದ್ದಾರೆ. ಈ ಮೂಲಕ ಇತರೆ ನ್ಯಾಯಧೀಶರಿಗೂ ಮಾದರಿ ಎನಿಸಿದ್ದಾರೆ.
ಇವರು ವಕೀಲ ಪದವಿ ಪಡೆದ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಆಂಗ್ಲ ಭಾಷೆ ಪುಸ್ತಕಗಳನ್ನು ಹಾಗೂ ನ್ಯಾಯಾಂಗದ ಮಾಹಿತೀನ ಕನ್ನಡದಲ್ಲಿ ಚಾಲ್ತಿಗೆ ತರಲು ಯತ್ನಿಸಿದ್ದರು. ನ್ಯಾಯಾಂಗ ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬಂದು, ಕರ್ನಾಟಕದ ನ್ಯಾಯಾಂಗದಲ್ಲೂ ಕನ್ನಡ ಭಾಷೆ ಪ್ರಾಬಲ್ಯ ಹೊಂದಲಿ ಎನ್ನುವ ಕಳಕಳಿ ಮಿಟ್ಟಲಕೋಡ ಅವರದು.
ಒಟ್ಟಿನಲ್ಲಿ ಮಿಟ್ಟಲಕೋಡ ಉನ್ನತ ಹುದ್ದೆಯಲ್ಲಿದ್ದು ಆಂಗ್ಲಭಾಷೆಯ ಹಿಡಿತವನ್ನು ತಮ್ಮ ಲೇಖನಿ ಮೂಲಕ ಸಡಿಲಗೊಳಿಸಿದ್ದಾರೆ. ಕನ್ನಡ ಭಾಷೆ ಪ್ರಾಬಲ್ಯಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಇವರ ಕನ್ನಡ ಪ್ರೇಮ ನಿಜಕ್ಕೂ ಮಾದರಿಯೇ ಸರಿ.