ಕರ್ನಾಟಕ

ಪೊಲೀಸ್ ಠಾಣೆಯಲ್ಲಿಯೇ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಮಾಲೂರು ಸರ್ಕಲ್ ಇನ್ಸ್ ಪೆಕ್ಟರ್

Pinterest LinkedIn Tumblr

raghavendra-1

ಕೋಲಾರ: ಠಾಣೆಯಲ್ಲಿಯೇ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಮಾಲೂರು ತಾಲೂಕಿನ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರ ಡೆತ್‍ನೋಟ್ ಪತ್ತೆಯಾಗಿದೆ.

ragavendra

ಈ ಹಿಂದೆ ಬೆಂಗಳೂರಿನ ಸರ್ಜಾಪುರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಾಘವೇಂದ್ರ ಅವರು 6 ತಿಂಗಳ ಹಿಂದೆ ಮಾಲೂರು ಠಾಣೆಯಲ್ಲಿ ಕರ್ತವ್ಯಕ್ಕೆ ಬಂದಿದ್ದರು.

ಕಳೆದ ರಾತ್ರಿ ರಾಘವೇಂದ್ರ ಅವರು ಠಾಣೆಯ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ರಾಘವೇಂದ್ರ ಅವರು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದು, ಬಳಿಕ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ರಾಘವೇಂದ್ರ ಅವರು ಮೂಲತಃ ವೇಮಗಲ್ ನ ನರಸಾಪುರ ಮೂಲದವರೆಂದು ತಿಳಿದುಬಂದಿದೆ. 2003ನೇ ಬ್ಯಾಚ್ ನ ಅಧಿಕಾರಿಯಾಗಿದ್ದ ರಾಘವೇಂದ್ರ ಅವರು ಈ ಹಿಂದೆ ಸರ್ಜಾಪುರ ನಂದಗುಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಘವೇಂದ್ರ ಕಳೆದ 2012, 2013, 2014 ರಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕಾರ್ಯ ನಿರ್ವಹಿಸಿದ್ದರು. ಎರಡು ವರ್ಷಗಳ ಹಿಂದಷ್ಟೇ ರಾಘವೇಂದ್ರ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಭಢ್ತಿ ಪಡೆದಿದ್ದರು ಎಂದು ತಿಳಿದುಬಂದಿದೆ.

ಇನ್ನು ಘಟನಾ ಸ್ಥಳಕ್ಕೆ ಕೋಲಾರ ಎಸ್ ಪಿ ದಿವ್ಯಾ ಗೋಪಿನಾಥ್ ಅವರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದಿವ್ಯಾ ಅವರು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಧಿವಿಜ್ಞಾನ ತಂಡಕ್ಕೆ ಮಾಹಿತಿ ತಿಳಿಸಲಾಗಿದ್ದು, ಅವರು ಬಂದು ಪರಿಶೀಲನೆ ನಡೆಸಲಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಘವೇಂದ್ರ ಮೇಲೆ ಲೋಕಾಯುಕ್ತ ಕೇಸ್
ಆತ್ಮಹತ್ಯೆ ಮಾಡಿಕೊಂಡಿರುವ ರಾಘವೇಂದ್ರ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಇಸ್ಪೀಟ್ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಇನ್ಸ್ ಪೆಕ್ಟರ್ ರಾಘವೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. 2014 ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾದ ನಂತರ ಒಂದು ವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ನಂತರ ಲೋಕಾಯುಕ್ತ ಪ್ರಕರಣದಿಂದ ಮುಕ್ತರಾದ ಮೇಲೆ ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮರಳು ಮಾಫಿಯಾ ಹಾಗೂ ಮೇಲಾಧಿಕಾರಿಗಳಿಂದ ಒತ್ತಡವಿತ್ತು ಎಂಬ ಮಾತುಗಳು ಕೇಳಿಬಂದಿವೆಯಾದರೂ, ರಾಘವೇಂದ್ರ ಅವರಿಗೆ ಕೌಟಂಬಿಕ ಸಮಸ್ಯೆಗಳಿತ್ತು ಎಂಬ ಮಾತುಗಳು ಕೂಡ ಕೇಳಿಬಂದಿವೆ.

Comments are closed.