ಕರ್ನಾಟಕ

ಕೇಂದ್ರ ತಂಡದಿಂದ ಒಣಗಿದ ಬೆಳೆ, ರೈತರ ಸಂಕಷ್ಟ: ಪರಿಶೀಲನೆ

Pinterest LinkedIn Tumblr

krsಬೆಂಗಳೂರು, ಅ. ೮- ಕಾವೇರಿ ಕಣಿವೆಯ ವಸ್ತುಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡ ಇಂದು ಕೆಆರ್‌ಎಸ್ ಅಣೆಕಟ್ಟು, ಹೇಮಾವತಿ ಹಾಗೂ ಗೊರೂರು ಜಲಾಶಯಗಳಿಗೆ ಭೇಟಿ ನೀಡಿ, ಜಲಾಶಯಗಳ ನೀರಿನ ಸಂಗ್ರಹದ ಪರಿಶೀಲನೆ ನಡೆಸಿತು.
ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ಕೇಂದ್ರ ತಂಡ ನಿನ್ನೆ ಇಡೀ ದಿನ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ನ‌ಡೆಸಿ, ರೈತರ ಸಂಕಷ್ಟ, ಒಣಗಿ ನಿಂತ ಬೆಳೆ, ನೀರಿಲ್ಲದೆ ಒಣಗಿ ನಿಂತಿರುವ ಕೆರೆಗಳ ದರ್ಶನ ಮಾಡಿದ ನಂತರ ರಾತ್ರಿ ಕೆಆರ್‌ಎಸ್ ಜಲಾಶಯದ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿತ್ತು. ಇಂದು ಬೆಳಿಗ್ಗೆ ಹೆಲಿಕಾಪ್ಟರ್‌‌ನಲ್ಲಿ ಒಂದು ಸುತ್ತು ಕೆಆರ್‌ಎಸ್ ಜಲಾಶಯದ ವೈಮಾನಿಕ ಸಮೀಕ್ಷೆ ನಡೆಸಿದ ತಂಡ, ಹೆಲಿಕಾಪ್ಟರ್‌ನಲ್ಲೇ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಶೋಕನಗರ ಗ್ರಾಮಕ್ಕೆ ಬಂದು ಅಲ್ಲಿ ಬೆಳೆಗಳ ಸ್ಥಿತಿಗತಿ, ಕೆರೆಗಳ ಪರಿಸ್ಥಿತಿಗಳನ್ನು ವೀಕ್ಷಿಸಿತು.
ಅಲ್ಲಿಂದ ರಸ್ತೆ ಮೂಲಕ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮಕ್ಕೆ ತೆರಳಿ ರೈತರ ಅಹವಾಲುಗಳನ್ನು ಆಲಿಸಿತು.
ಕಾವೇರಿ ಕಣಿವೆಯ ವಸ್ತುಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡಕ್ಕೆ ಇಂದು ಸಹ ಕಾವೇರಿ ಕೊಳ್ಳದ ರೈತರು ನೀರಿಲ್ಲದ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ನ್ಯಾಯ ದೊರಕಿಸುವಂತೆ ಮನವಿ ಮಾಡಿದರು.
ಮಂಡ್ಯ ಜಿಲ್ಲೆಯ ಪ್ರವಾಸದ ನಂತರ ಅಧ್ಯಯನ ತಂಡ ರಸ್ತೆ ಮೂಲಕವೇ ಹೊಳೆನರಸೀಪುರ ಮಾರ್ಗವಾಗಿ ಹೇಮಾವತಿ, ಗೊರೂರು ಜಲಾಶಯಗಳಿಗೆ ತೆರಳಿ ಅಲ್ಲಿನ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆಯಿತು.
ಈ ಅಧ್ಯಯನ ತಂಡ ಭೇಟಿ ನೀಡಿದ ಕಡೆಯಿಂದೆಲ್ಲಾ ರೈತರು ನೀರಿಲ್ಲದೆ ಬೆಳೆ ಒಣಗುತ್ತಿರುವುದನ್ನು, ಕೆರೆ ಬತ್ತಿ ಹೋಗಿ ಕುಡಿಯುವ ನೀರಿಗೂ ಆಗಿರುವ ತೊಂದರೆಗಳನ್ನು ತಂಡದ ಗಮನಕ್ಕೆ ತಂದರು.
ಕೇಂದ್ರ ಅಧ್ಯಯನ ತಂ‌‌ಡದಲ್ಲಿ ತಂಡದ ಮುಖ್ಯಸ್ಥ ಜಿ.ಎಸ್. ಝಾ ಜತೆ ಕೇಂದ್ರ ಜಲ ಆಯೋಗದ ಸದಸ್ಯ ಸಯ್ಯದ್ ಹುಸೇನ್, ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಸುಬ್ಬಯ್ಯ, ಕೇಂದ್ರದ ಮುಖ್ಯ ಎಂಜಿನಿಯರ್ ಆರ್.ಕೆ. ಗುಪ್ತ, ತಮಿಳುನಾಡಿನ ಮುಖ್ಯ ಎಂಜಿನಿಯರ್ ಸ್ವಾಮಿನಾಥನ್, ಪುದುಚೇರಿಯ ಮುಖ್ಯ ಎಂಜಿನಿಯರ್ ಷಣ್ಮುಗ ಸುಂದರಂ, ರಾಜ್ಯದ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಸಂಸದ ಪುಟ್ಟರಾಜು, ಶಾಸಕ ನಾರಾಯಣ ಗೌಡ ಸೇರಿದಂತೆ ಹಲವು ಮುಖಂಡರು, ಸ್ಥಳೀಯ ಅಧಿಕಾರಿಗಳು ಇದ್ದರು.
ಇಂದು ರಾತ್ರಿ ಮೆಟ್ಟೂರಿಗೆ
ಹೇಮಾವತಿ, ಗೊರೂರು ಜಲಾಶಯ ಭೇಟಿ ನಂತರ ಹೆಲಿಕಾಪ್ಟರ್ ಮೂಲಕ ಸಂಜೆ ಬೆಂಗಳೂರಿಗೆ ಆಗಮಿಸಿದ ತಂಡ, ಅಧಿಕಾರಿಗಳ ಜತೆ ಸಭೆ ನಡೆಸಿತು.
ಇದಾದ ನಂತರ ರಸ್ತೆ ಮೂಲಕ ರಾತ್ರಿ ಮೆಟ್ಟೂರಿಗೆ ತೆರಳಲಿರುವ ಅಧ್ಯಯನ ತಂಡ ರಾತ್ರಿ ಅಲ್ಲೇ ವಾಸ್ತವ್ಯ ಹೂಡಿ, ನಾಳೆ ತಮಿಳುನಾಡಿನಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಯಲಿದೆ.

Comments are closed.