ಕರ್ನಾಟಕ

ಕಾವೇರಿ ವಿವಾದ: ಉಮಾ ಭಾರತಿ ಭೇಟಿಗೆ ತೆರಳಿದ ರಾಜ್ಯ ಬಿಜೆಪಿ

Pinterest LinkedIn Tumblr

uma_bhartiಬೆಂಗಳೂರು, ಸೆ.೨೮–ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಾಳೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಯನ್ನು ಕೇಂದ್ರದ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರಿಗೆ ಮನವರಿಕೆ ಮಾಡಿಕೊಡಲು ರಾಜ್ಯದ ಬಿಜೆಪಿ ಮುಖಂಡರು ಹಾಗೂ ಸಂಸದರು ಇಂದು ಸಂಜೆಯೇ ದೆಹಲಿಗೆ ತೆರಳಲಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ ರಾಜ್ಯದ ಬಿಜೆಪಿ ಸಚಿವರುಗಳು ಹಾಗೂ ಮುಖಂಡರುಗಳು ಕಾವೇರಿಗೆ ಸಂಬಂಧಿಸಿದಂತೆ ವಾಸ್ತವ ಸ್ಥಿತಿಯನ್ನು ಉಮಾ ಭಾರತಿ ಅವರಿಗೆ ಮನವರಿಕೆ ಮಾಡಿಕೊಡಲು ಇಂದೇ ದೆಹಲಿಗೆ ತೆರಳುವ ತೀರ್ಮಾನವನ್ನು ಕೈಗೊಂಡರು.

ಸುಪ್ರೀಂಕೋರ್ಟ್‌ನ ಸೂಚನೆಯಂತೆ ಕೇಂದ್ರದ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ 2 ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನಾಳೆ ದೆಹಲಿಯಲ್ಲಿ ಕರೆದಿದ್ದು, ಈ ಸಭೆಗೂ ಮುನ್ನವೇ ಉಮಾ ಭಾರತಿ ಅವರನ್ನು ಭೇಟಿ ಮಾಡಿ, ರಾಜ್ಯದ ಕಾವೇರಿ ಕೊಳ್ಳದ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ. ಸದಾನಂದಗೌಡ, ವಿರೋಧ ಪಕ್ಷಗಳ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಬಿಜೆಪಿ ಸಂಸದರು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರೂ ಒಟ್ಟಾಗಿಯೇ ಕೇಂದ್ರ ಸಚಿವೆ ಉಮಾ ಭಾರತಿ ಅವರನ್ನು ಭೇಟಿ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ಸಿಎಂ ದೆಹಲಿಗೆ
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾತ್ರಿ ಇಲ್ಲವೇ ನಾಳೆ ಬೆಳಿಗ್ಗೆ ದೆಹಲಿಗೆ ತೆರಳಲಿದ್ದಾರೆ.
ಮುಖ್ಯಮಂತ್ರಿಗಳ ಜತೆ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಸಹ ದೆಹಲಿಗೆ ಪ್ರಯಾಣಿಸಲಿದ್ದಾರೆ.

Comments are closed.