ಕರ್ನಾಟಕ

ಕೆ.ಜೆ ಜಾರ್ಜ್‌ ಗೆ ಬೆಂಗಳೂರು ಉಸ್ತುವಾರಿ ಖಾತೆ

Pinterest LinkedIn Tumblr

georgeಬೆಂಗಳೂರು, ಸೆ. ೨೬ – ಮಂಗಳೂರು ಡಿವೈಎಸ್‌ಪಿ ಎಂ.ಕೆ ಗಣಪತಿ ಆತ್ಯಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಜೆ ಜಾರ್ಜ್‌ನಿರೀಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಇಂದು ಮತ್ತೆ ಸೇರ್ಪಡೆಯಾಗಿದ್ದು ಅವರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಲಾಗಿದೆ.
ರಾಜಭವನದ ಬ್ವಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಅಧಿಕಾರ ಮತ್ತು ಗೌಪತ್ಯೆಯ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವ ಸಂಪುಟದ ಸದಸ್ಯರು ಸಂಸದ ಕೆ.ಎಚ್. ಮುನಿಯಪ್ಪ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಮಂಗಳೂರು ಡಿವೈಎಸ್‌ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಕಳೆದ ಮೂರು ತಿಂಗಳ ಹಿಂದೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತನಿಖೆ ನಡೆಸಿದ ಸಿಐಡಿ ತಂಡ, ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಅವರ ಯಾವುದೇ ಪಾತ್ರ ಇಲ್ಲ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು.
ಆರೋಪ ಮುಕ್ತರಾದ ಬಳಿಕ ಕೆ.ಜೆ ಜಾರ್ಜ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿತ್ತು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಾರ್ಜ್ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಅಭಿವೃದ್ಧಿ ಖಾತೆ
ರಾಜೀನಾಮೆ ನೀಡುವುದಕ್ಕೂ ಮುನ್ನ ಸಚಿವ ಜಾರ್ಜ್ ಹೊಂದಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಹಾಗು ಬೆಂಗಳೂರು ನಗರ ಉಸ್ತುವಾರಿ ಜವಾಬ್ದಾರಿ ನೂತನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಸಿಗುವ ಸಾಧ್ಯತೆಗಳಿವೆ. ಬೆಂಗಳೂರು ಅಭಿವೃದ್ಧಿ ಖಾತೆಯ ಜೊತೆಗೆ ಹೆಚ್ಚುವರಿ ಖಾತೆಯ ಜವಾಬ್ದಾರಿ ಸಿಕ್ಕರೂ ಆಶ್ಚರ್ಯವಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಾಜಭವನದ ಬಳಿ ಸಂಭ್ರಮ
ಸಚಿವ ಕೆ.ಜೆ ಜಾರ್ಜ್ ಮರಳಿ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಭವನ ಬಳಿ ಅಭಿಮಾನಿಗಳು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರು ಜಾರ್ಜ್ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು.
ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ಕೇಂದ್ರ ವಲಯದ ಡಿಸಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಬಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

Comments are closed.