ಕರ್ನಾಟಕ

67 ಲಕ್ಷ ಮೌಲ್ಯದ ಚಿನ್ನಾಭರಣಗಳೊಂದಿಗೆ ಕಳ್ಳರ ಬಂಧನ

Pinterest LinkedIn Tumblr

crime

ಬೆಂಗಳೂರು, ಸೆ. ೨೪ – ಮನೆ ಕಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಮನೆಗಳ್ಳರು ಬಸ್‌ನಲ್ಲಿ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಕಳ್ಳ ಸೇರಿ 6 ಮಂದಿಯನ್ನು ಬಂಧಿಸಿ 67.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಾಸಿಪಾಳ್ಯ ಪೊಲೀಸರು ಮೋಜಿನ ಜೀವನ ನಡೆಸಲು ಮನೆ ಕಳವು ಮಾಡುತ್ತಿದ್ದ ಹೆಗಡೆನಗರದ ಪಾಂಡಿರಾಜ್ (21), ಚೋಳನಾಯಕನಹಳ್ಳಿಯ ಮಂಜುನಾಥ್ (22), ವಿದ್ಯಾರಣ್ಯಪುರದ ಪ್ರವೀಣ್ (23), ಆರ್‌ಟಿ‌ನಗರದ ನವೀನ್ ಕುಮಾರ್ (21)ನನ್ನ ಬಂಧಿಸಿ ಒಂದು ಕೆಜಿ 271 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಸೇರಿದಂತೆ 50 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದ ವಿವಿಧೆಡೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ಮುರಿದು ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರಲ್ಲದೆ, ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಚಿನ್ನಾಭರಣಗಳನ್ನು ಮುತ್ತುಟ್ಟು, ಮಣಪ್ಪುರಮ್ ಇತರ ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇಲೆ ಆರೋಪಿಗಳನ್ನು ಬಂಧಿಸಿದ ಕಲಾಸಿಪಾಳ್ಯ ಪೊಲೀಸರು ಕೆಂಗೇರಿ, ಉಪ್ಪಾರಪೇಟೆ, ಸಿಟಿ ಮಾರುಕಟ್ಟೆ, ವಿದ್ಯಾರಣ್ಯ ಪುರ, ಬ್ಯಾಟರಾಯನಪುರ ಅಲ್ಲದೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ 20 ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಬಸ್‌ನಲ್ಲಿ ಕಳವು, ಸೆರೆ
ಬಸ್‌ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಚಿನ್ನಾಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಮಂಡ್ಯದ ಗಣಂಗೂರಿನ ಚೆಲುವರಾಯ್ (42)ನನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 15 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣಗಳನ್ನು ವಶಪ‌ಡಿಸಿಕೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಯು ಬಸ್‌ನಲ್ಲಿ ಪ್ರಯಾಣಿಕನ ಸೋಗಿನಲ್ಲಿ ಸಂಚರಿಸುತ್ತ ಪ್ರಯಾಣಿಕರ ಚಿನ್ನದ ಸರ ಇನ್ನಿತರ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ. ಆರೋಪಿಯ ಬಂಧನದಿಂದ ಉಪ್ಪಾರಪೇಟೆಯ 6, ಕಾಟನ್‌ಪೇಟೆ, ಮೈಕೋಲೇಔಟ್‌ನ ತಲಾ 2, ಬಸವನಗುಡಿ, ಚಿಕ್ಕಪೇಟೆ, ಬ್ಯಾಡರಹಳ್ಳಿ, ಹಿರಿಸಾವೆಯ ತಲಾ 1 ಸೇರಿ ಒಟ್ಟು 14 ಪ್ರಕರಣಗಳು ಪತ್ತೆಯಾಗಿವೆ.
ಕ್ಯಾಮೆರಾ ಕಳ್ಳ
ಗುಂಡ್ಲುಪೇಟೆಯ ಶಾರ್ಪ್ ಡಿಜಿಟಲ್ ಸ್ಟುಡಿಯೋದಲ್ಲಿ ಡಿಜಿಟಲ್ ಕ್ಯಾಮೆರಾ‌ಗಳನ್ನು ಕಳವು ಮಾಡಿದ್ದ ಆರೋಪಿ ಪುನೀತ್ (19)ನನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 2.5 ಲಕ್ಷ ಮೌಲ್ಯದ ಡಿಜಿಟಲ್ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಕಳವು ಮಾಡಿದ ಕ್ಯಾಮೆರಾಗಳನ್ನು ಉಪ್ಪಾರಪೇಟೆಯಲ್ಲಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ವಲಯದ ಉಪ ಪೊಲೀಸ್ ಆಯುಕ್ತ ಅನುಚೇತ್ ಅವರು ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ನಡೆಸಿದ ತಂಡಕ್ಕೆ ಚರಣ್ ರೆಡ್ಡಿ ಅವರು ನಗದು ಬಹುಮಾನ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅನುಚೇತ್ ಅವರಿದ್ದರು.

ಮಾಲೀಕರ ಮನೆಯಲ್ಲಿ ಕಳವು ಆರೋಪಿ ಬಂಧನ
ಬೆಂಗಳೂರು, ಸೆ. ೨೪ – ಕೆಲಸ ಮಾಡುತ್ತಿದ್ದ ಮನೆಯಲ್ಲಿ 20 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್‌ ಸೇರಿ ಲಕ್ಷಾಂತರ ಮೌಲ್ಯದ ಆಭರಣಗಳನ್ನು ಕಳವು ಮಾಡಿ ಬಿಹಾರಕ್ಕೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಮುಜಾಫರ್ ಜಿಲ್ಲೆಯ ಮುನ್ನಾ ಸಹಾನಿ (40) ಬಂಧಿತ ಆರೋಪಿಯಾಗಿದ್ದು, ಆತನಿಂದ 20 ಲಕ್ಷ ಮೌಲ್ಯದ ವಜ್ರದ ನೆಕ್ಲೆಸ್, 5 ಲಕ್ಷ ಮೌಲ್ಯದ ಚಿನ್ನದ ನೆಕ್ಲಸ್, 20 ಲಕ್ಷ ಮೌಲ್ಯದ ಚಿನ್ನದ ವರಮಹಾಲಕ್ಷ್ಮಿ ಮುಖವಾಡ ಸೇರಿದಂತೆ 45 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಯು ನಾಗರಬಾವಿ ರಸ್ತೆಯ ಅಮರ್‌ಜ್ಯೋತಿ ನಗರದ ಬಿಂದು ಹನುಮಾನ್ ಅಪಾರ್ಟ್‌ಮೆಂಟ್‌ನ ಬಟ್ಟೆ ವ್ಯಾಪಾರಿ ಪದ್ಮಾವತಿ ಕೋಟ್ಯಾನ್ ಅವರ ಮನೆಯಲ್ಲಿ ಕಳೆದ 10 ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದನು.
ಮನೆಯಲ್ಲಿ ಲಕ್ಷಾಂತರ ಬೆಲೆಬಾಳುವ ವಜ್ರ ಹಾಗೂ ಚಿನ್ನಾಭರಣಗಳನ್ನು ಗಮನಿಸಿದ ಆರೋಪಿಯು ಕಳೆದ ಸೆ. 18 ರಂದು ರಾತ್ರಿ ವಜ್ರದ ನೆಕ್ಲೆಸ್, ಚಿನ್ನದ ನೆಕ್ಲೆಸ್, ಚಿನ್ನದ ವರಮಹಾಲಕ್ಷ್ಮಿ ಮುಖವಾಡ, 10 ಸಾವಿರ ನಗದನ್ನು ದೋಚಿ ಅವರ ಮನೆಯ ಮುಂಭಾಗ ನಿಲ್ಲಿಸಿದ್ದ ಆಕ್ಸಿಸ್ ಹೋಂಡಾದಲ್ಲಿಟ್ಟುಕೊಂಡು ಪರಾರಿಯಾಗಿದ್ದನು.
ಕಳವು ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರು ಆರೋಪಿಯ ಜಾಡು ಹಿಡಿದು ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

Comments are closed.