
ಬೆಂಗಳೂರು, ಸೆ. ೧೬- ಬಿಬಿಎಂಪಿ ವ್ಯಾಪ್ತಿಗೆ ಬರುವ ಶೆಟ್ಟಿಹಳ್ಳಿ ಬಳಿ ರಾಜಕಾಲುವೆ ಮೇಲೆ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಇಂದು ಗುರುತು ಹಾಕುವ ಕಾರ್ಯ ಆರಂಭಿಸಿದ್ದು ಎರಡು ದಿನಗಳೊಳಗಾಗಿ ಕಾಲುವೆ ಮೇಲಿನ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಲಿದೆ.
ದಾಸರಹಳ್ಳಿ ವಲಯದಲ್ಲಿನ ಮೇದರಹಳ್ಳಿ ಗ್ರಾಮದಲ್ಲಿ ಸುಮಾರು ಒಂದೂವರೆ ಕಿ. ಮೀ. ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು 15 ನಿವೇಶನಗಳಿವೆ. ಅವುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಬೃಹತ್ ನೀರುಗಾಲುವೆ ಮುಖ್ಯ ಎಂಜಿನಿಯರ್ ಸಿದ್ದೇಗೌಡ ತಿಳಿಸಿದರು.
ಕಮ್ಮಗೊಂಡನಹಳ್ಳಿ ಕೆರೆಯಿಂದ ಚಿಕ್ಕಬಾಣಾವಾರದ ಕೆರೆಗೆ ಹರಿಯುವ ರಾಜುಕಾಲುವೆ ಬಳಿ ಮೇದರಹಳ್ಳಿ ಪಶ್ಚಿಮ ಕೌಂಟಿ ಬಡಾವಣೆ ಹತ್ತಿರ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಈ ಭಾಗದಲ್ಲಿ 1 ಆರ್ಸಿಸಿ ಕಟ್ಟಡ, 1 ಎಸಿ ಶೀಟ್ ಕಟ್ಟಡ, 2 ಕಾಂಪೌಂಡ್ ವಾಲ್ಗಳನ್ನು 2 ದಿನಗಳೊಳಗಾಗಿ ನೆಲಸಮಗೊಳಿಸಲಾಗುವುದು ಎಂದರು.
ನಿನ್ನೆ ಜೆಸಿಬಿ ಯಂತ್ರದ ಸಹಾಯದಿಂದ 350 ಮೀಟರ್ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗಿದೆ. ಉಳಿದ ಭಾಗದಲ್ಲೂ ಸ್ವಚ್ಛತಾ ಕಾರ್ಯವನ್ನು ಆರಂಭಿಸಲಾಗುವುದು. ಸರ್ವೆ ಅಧಿಕಾರಿಗಳು ಬಂದೊಡನೆ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಇಂದು ಸಂಜೆ ಇಲ್ಲವೆ ನಾಳೆ ಗುರುತು ಹಾಕುವ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ರಾಜಕಾಲುವೆ ಮೇಲಿನ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ದಾಸರಹಳ್ಳಿ ವಲಯದ ಕಾರ್ಯಪಾಲಕ ಅಭಿಯಂತರ(ಬೃಹತ್ ನೀರುಗಾಲುವೆ) ವೈ.ಎನ್. ಶೇಷಾದ್ರಿ ತಿಳಿಸಿದರು.
Comments are closed.