ಬೆಂಗಳೂರು, ಸೆ.9- ರಾಜ್ಯದ ಕಾವೇರಿ ನದಿಯಿಂದ 61 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಕೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಈಗಾಗಲೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗ ತುಂಬ ಕಷ್ಟದಿಂದ ನೀರು ಬಿಡಲಾಗಿದೆ. ಇನ್ನೂ ಹೆಚ್ಚಿನ ನೀರು ಕೇಳಿದರೆ ಕಾವೇರಿ ಮೇಲುಸ್ತುವಾರಿ ಸಮಿತಿಯೇ ನೀರು ಬಿಡಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಮ್ಮ ರೈತರಿಗೆ ಕನಿಷ್ಟ ಒಂದು ಬೆಳೆಗಾದರೂ ನೀರು ಬೇಕು. ಕಾವೇರಿ ನ್ಯಾಯಾಧಿಕರಣದ ಮೂಲ ಆದೇಶದ ಬಗ್ಗೆಯೇ ನಮ್ಮ ಆಕ್ಷೇಪ ಇದೆ. ಪ್ರತಿ ತಿಂಗಳು ನೀರು ಬಿಡಲು ನಿಗದಿಪಡಿಸಿರುವ ಪ್ರಮಾಣ ಸರಿಯಾದುದಲ್ಲ. ಪ್ರತಿ ವರ್ಷವೂ ಎರಡೂ ರಾಜ್ಯಗಳ ವಸ್ತುಸ್ಥಿತಿ ಪರಿಶೀಲಿಸಿ ನೀರು ಬಿಡುವಂತಹ ವ್ಯವಸ್ಥೆಯಾಗಬೇಕು.
ಅ.18ಕ್ಕೆ ಸುಪ್ರೀಂಕೋರ್ಟ್ನಲ್ಲಿ ಮೂಲ ಅರ್ಜಿಯ ವಿಚಾರಣೆ ನಡೆಯಲಿದೆ. ಆಗ ರಾಜ್ಯ ಸರ್ಕಾರ ಎಲ್ಲ ಅಂಶಗಳನ್ನೂ ಪ್ರಶ್ನಿಸಲಿದೆ ಎಂದರು. ರಾಜ್ಯದ ರೈತರು ಶಾಂತ ರೀತಿಯಿಂದ ಪ್ರತಿಭಟನೆ ಮಾಡಬೇಕು. ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ, ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಶಾಂತ ರೀತಿಯಿಂದ ವರ್ತಿಸಬೇಕು. ನಾಡಿನ ಜನರ ಭಾವನೆಗಳನ್ನು ರಾಜ್ಯ ಸರ್ಕಾರ ಪರಿಗಣಿಸುತ್ತದೆ ಎಂದು ಪಾಟೀಲ್ ತಿಳಿಸಿದರು.
Comments are closed.