ಕರ್ನಾಟಕ

ನುಗ್ಗಿದ ಪ್ರವಾಹ-ಜಲಪ್ರಳಯದ ಭೀತಿ

Pinterest LinkedIn Tumblr

6belgaum2-clrಬೆಳಗಾವಿ, ಆ.೬- ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಅನೇಕ ನದಿಗಳು ತುಂಬಿ ಹರಿಯುತ್ತಿದ್ದು, ಚಿಕ್ಕೋಡಿಯಲ್ಲಿ ೯ ಸೇತುವೆಗಳು ಮುಳಗಡೆ ಕಂಡಿವೆ.

ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ವೇದಗಂಗಾ, ಧೂದಗಂಗಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದೆ.

ಈ ಪಂಚ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ೭, ಖಾನಾಪುರ ತಾಲೂಕಿನ ೨, ಅಥಣಿ ತಾಲೂಕಿನ ೧ ಸೇತುವೆ ಸೇರಿದಂತೆ ಒಟ್ಟು ೯ ಸೇತುವೆಗಳು ಮುಳುಗಡೆಯಾಗಿ, ಜನ ಸಂಪರ್ಕ ಕಡಿತಗೊಂಡಿದೆ.
ರಾಯಭಾಗ ತಾಲೂಕಿನ ಕುಡಚಿ-ಉಗಾರಖುರ್ದ, ಉಗಾರಬಿಕೆ-ಉಗಾರಖುರ್ದ ಹಾಗೂ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಸಿದ್ನಾಳ-ಅಕ್ಕೋಳ, ಭಿವಸಿ-ಜತ್ರಾಟ, ಹುನ್ನರಗಿ-ಭೋಜವಾಡಿ ಸೇರಿದಂತೆ ೯ ಸೇತುವೆಗಳು ಜಲಾವೃತವಾಗಿವೆ. ಜಿಲ್ಲೆಯ ಹಲವು ದೇವಾಲಯಗಳು ಈಗಾಗಲೇ ಜಲಾವೃತಗೊಂಡಿವೆ.
ಕೊಲ್ಲಾಪುರದ ರಾಧಾನಗರಿ ಜಲಾಶಯದಿಂದ ೫೭ ಸಾವರಿ ಕ್ಯೂಸೆಕ್ಸ್, ರಾಜಾಪುರ ಜಲಾಶಯದಿಂದ ೧.೨೧ ಲಕ್ಷ ಕ್ಯೂಸೆಕ್ಸ್, ಮಹಾರಾಷ್ಟ್ರದ ವಾರಣಾ ಜಲಾಶಯದಿಂದ ೮೩೧ ಕ್ಯೂಸೆಕ್ಸ್, ಹಿಪ್ಪರಗಿ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ೨೪೧ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದರಿಂದ ನದಿಗಳು, ಸಮುದ್ರದಂತೆ ಉಕ್ಕಿ ಹರಿಯುತ್ತಿವೆ.
ಈ ಐದು ನದಿಗಳ ನದಿ ತೀರದ ನಿವಾಸಿಗಳ ಬವಣೆ ಹೇಳತೀರದಂತಾಗಿದೆ. ಜಿಲ್ಲಾಡಳಿತ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಎಚ್ಚರಿಕೆ ನೀಡಿ, ನದಿ ತೀರದ ಹಳ್ಳಿಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ಆದರೆ ಹಳ್ಳಿಗಳಲ್ಲಿ ನುಗ್ಗಿರುವ ನೀರನ್ನು ದಾಟಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಮಹಿಳೆ, ಮಕ್ಕಳು, ಜಾನುವಾರುಗಳನ್ನು ಕಟ್ಟಿಕೊಂಡು ಜನತೆ ತೆರಳಲು ಹರಸಾಹಸ ಪಡಬೇಕಾಗಿದೆ. ಅಲ್ಲಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದರೂ, ಆ ಕೇಂದ್ರಗಳನ್ನು ಜನತೆ ಮುಟ್ಟಲಾರದಂತಹ ಪರಿಸ್ಥಿತಿಯನ್ನು ಈ ಮಹಾಮಳೆ ತಂದೊಡ್ಡಿದ್ದು, ಜಿಲ್ಲೆಯ ಜನರ ಸ್ಥಿತಿ ಅಯೋಮಯವಾಗಿದೆ.
ಅಪಾರ ಬೆಳೆಹಾನಿ:
ಚಿಕ್ಕೋಡಿ, ಖಾನಾಪುರ ತಾಲೂಕಿನ ಹಲವಾರು ಗ್ರಾಮಗಳ ಜಮೀನುಗಳಿಗೆ ನುಗ್ಗಿರುವ ನದಿ ನೀರು ರೈತ ಬೆಳೆದ ಲಕ್ಷಾಂತರ ರೂ. ಮೌಲ್ಯದ ಬೆಳೆಹಾನಿಯನ್ನು ತಂದೊಡ್ಡಿದೆ. ಸರಿಯಾಗಿ ಮಳೆಯಾಗಿ ಬೆಳೆ ಕೈಗೆ ಬಂದು ಈ ಬಾರಿಯಾದರೂ ಕೊಂಚ ಕಾಸು ಕಂಡೇವು ಎಂಬ ರೈತನ ಆಸೆಗೆ ಮಹಾರಾಷ್ಟ್ರದ ಮಳೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಹಳ್ಳಿಗಳ ಸಂಪರ್ಕ ಕಡಿತ:
ನದಿಗಳಿಂದ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಖಾನಾಪುರ ತಾಲೂಕಿನ ಮಾಂಗೆನಹಾಳ, ನೀರಸಾ, ಕೋಂಗಳಾ, ಲೋಂಡಾ, ದೋಡಿಕೊಪ್ಪ, ತಿಳೇವಾಡಿ, ಹೆಮ್ಮಡಗಾ ಸೇರಿದಂತೆ ಹತ್ತಾರು ಹಳ್ಳಿಗಳ ಸಂಪರ್ಕವನ್ನು ಕಡಿತಗೊಳಿಸಿದೆ.
ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಈ ಗ್ರಾಮಗಳ ಜನರು ತೀವ್ರ ಪರದಾಡುತ್ತಿದ್ದಾರೆ.
ಜಿಲ್ಲಾಡಳಿತ ಸಾಧ್ಯವಾದ ಮಟ್ಟಿಗೆ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದರೂ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಂತೂ ಕಂಡು ಬರದೆ ಜನರ ಗೋಳು ತಪ್ಪಿಲ್ಲ.

Comments are closed.