ಬೆಂಗಳೂರು: ಕರ್ನಾಟಕ ಮತ್ತೊಬ್ಬ ಪುತ್ರನ ಬೆಳವಣಿಗೆಯನ್ನು ನೋಡಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ 39 ವರ್ಷದ ರಾಕೇಶ್ ಸಿದ್ದರಾಮಯ್ಯ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿಯಲಿದ್ದರು. ಆದರೆ ದೂರದ ಬೆಲ್ಜಿಯಂನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಮೂಲಕ ಸಿದ್ದರಾಮಯ್ಯ ಅವರ ಕನಸು ನುಚ್ಚುನೂರಾಗಿದೆ.
ರಾಕೇಶ್ ಸಾವು ಸಿದ್ದರಾಮಯ್ಯ ಅವರಿಗೆ ತೀವ್ರ ಆಘಾತ ಉಂಟು ಮಾಡಿದೆ. ಸಿದ್ದರಾಮಯ್ಯ ಅವರು ಕುಟುಂಬ ರಾಜಕಾರಣದ ವಿರೋಧಿಯಾಗಿದ್ದರೂ ರಾಕೇಶ್ ರಾಜಕೀಯ ಭವಿಷ್ಯದ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದರು. ಸಿದ್ದರಾಮಯ್ಯ ದಂಪತಿಗೆ ಮುದ್ದಿನ ಪುತ್ರನಾಗಿದ್ದ ರಾಕೇಶ್ 1977 ಜುಲೈ 13 ರಂದು ಜನಿಸಿದ್ದರು. ಪದವಿ ವರೆಗೆ ವ್ಯಾಸಂಗ ಮಾಡಿದ್ದ ರಾಕೇಶ್ ಅವರು ಸ್ಮಿತಾ ಅವರೊಂದಿಗೆ ಪ್ರೇಮ ವಿವಾಹವಾಗಿದ್ದು, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಇಬ್ಬರೂ ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಿನಿಮಾ ಬಗ್ಗೆ ಒಲವು ಹೊಂದಿದ್ದ ರಾಕೇಶ್ ಸಿದ್ದರಾಮಯ್ಯ “ನಿನಗಾಗಿ ನಾನು’ ಕನ್ನಡ ಚಲನಚಿತ್ರದಲ್ಲೂ ನಾಯಕನಟರಾಗಿ ನಟಿಸಿದ್ದರು. ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದ ರಾಕೇಶ್ ನಂತರ ಚಿತ್ರರಂಗದಿಂದ ದೂರ ಉಳಿದು ರಾಜಕೀಯ ರಂಗದತ್ತ ಆಕರ್ಷಣೆ ಬೆಳೆಸಿಕೊಂಡಿದ್ದರು.
ಸಿದ್ದರಾಮಯ್ಯ ಅವರು ಜನತಾ ಪರಿವಾರ, ಜೆಡಿಎಸ್‌ನಲ್ಲಿದ್ದಷ್ಟೂ ದಿನ ಹಾಗೂ ಕಾಂಗ್ರೆಸ್ ಸೇರಿದ ಆರಂಭದ ವರ್ಷಗಳಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯದಿಂದ ದೂರವೇ ಇಟ್ಟಿದ್ದರು. ರಾಕೇಶ್ ಸಿದ್ದರಾಮಯ್ಯ ಸಹ ರಾಜಕಾರಣದಲ್ಲಿ ನೇರವಾಗಿ ಗುರುತಿಸಿಕೊಳ್ಳದಿದ್ದರೂ ತಂದೆಯ ಕ್ಷೇತ್ರದ ಜನರ ಜನತೆ ಸಂಪರ್ಕದಲ್ಲಿರುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲೇ ಸವಾಲಾಗಿದ್ದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಅತ್ಯಂತ ಕಡಿಮೆ ಅಂತರದಿಂದ ಗೆದ್ದ ನಂತರ ರಾಕೇಶ್ ಅವರು ತಂದೆಯ ನೆರಳಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು.
ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಅಥವಾ ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದ ಭವಿಷ್ಯದ ನಾಯಕ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ರಾಕೇಶ್ ಸಿದ್ದರಾಮಯ್ಯ, ಕ್ಷೇತ್ರದ ಮತದಾರರ ನೋವು- ನಲಿವುಗಳಿಗೆ ತಕ್ಷಣ ಸ್ಪಂದಿಸುತ್ತಿದ್ದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿ, ಜನತಾ ದರ್ಶನ ನಡೆಸುತ್ತಿದ್ದಾಗ ಜತೆಯಲ್ಲೇ ಇದ್ದು ಕ್ಷೇತ್ರದಿಂದ ಬಂದ ಜನರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದರು.
ತಂದೆಯೇ ನನಗೆ ಗುರು, ಮಾರ್ಗದರ್ಶಕ. ಅವರ ಪ್ರೇರಣೆಯಿಂದಲೇ ನಾನು ಉತ್ತಮ ಮನುಷ್ಯನಾಗಿದ್ದೇನೆ ಎಂದು ಸದಾ ಹೇಳುತ್ತಿದ್ದ ರಾಕೇಶ್, ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಿದ್ದರು.
ಹಿಂದೆ ಚಾಮುಂಡೇಶ್ವರಿ ಕ್ಷೇತ್ರ, ಆ ನಂತರ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಪ್ರಚಾರದ ಉಸ್ತುವಾರಿ ವಹಿಸಿಕೊಂಡು ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆ ಆತ್ಮೀಯವಾಗಿ ಬೆರೆಯುತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಕೇಶ್ ಹಾಗೂ ಯತೀಶ್ ಎಂಬ ಇಬ್ಬರು ಗಂಡು ಮಕ್ಕಳು. ಯತೀಶ್ ವೃತ್ತಿಯಲ್ಲಿ ವೈದ್ಯರಾಗಿದ್ದು, ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ರಾಕೇಶ್ ಅವರು ರಾಜಕಾರಣದಲ್ಲಿ ಗುರುತಿಸಿಕೊಂಡು ತಂದೆಯ ಉತ್ತರಾಧಿಕಾರಿಯಾಗಲು ಬಯಸಿದ್ದರು. ಸಿದ್ದರಾಮಯ್ಯ ಕುಟುಂಬ ವರ್ಗವೂ ರಾಕೇಶ್ ಅವರನ್ನು ರಾಜಕಾರಣದಲ್ಲಿ ಬೆಳೆಸುವ ಬಯಕೆ ಹೊಂದಿತ್ತು. ಮುಂದಿನ ಚುನಾವಣೆಯಲ್ಲಿ ರಾಕೇಶ್ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು.
ಇಡೀ ಜಿಲ್ಲೆಯ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಪುತ್ರ ಎಂದು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ರಾಕೇಶ್‌ಗೆ ಸುತ್ತಿಕೊಂಡಿದ್ದವು.
Comments are closed.