
ತುಮಕೂರು: ಪ್ರಕರಣವೊಂದರ ನಿಮಿತ್ತ ದಾವಣಗೆರೆಗೆ ತೆರಳಿ ಆರೋಪಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಇನ್ಸ್ಪೆಕ್ಟರ್ಗಳು ಹಾಗೂ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಕಾರಿನಲ್ಲಿದ್ದ ಆರೋಪಿ ಪರಾರಿಯಾಗಿದ್ದು ಈತನನ್ನು ಯಾವ ಪ್ರಕರಣದಲ್ಲಿ ಬಂಧಿಸಿ ಕರೆತರಲಾಗುತ್ತಿತ್ತು ಎಂಬ ಬಗ್ಗೆ ಸದ್ಯ ತಿಳಿದುಬಂದಿಲ್ಲ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿರುವ ಇನ್ಸ್ಪೆಕ್ಟರ್ ಆನಂದ್ ಕಬೂರಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾಆಸ್ಪತ್ರೆಗೆ ಹಾಗೂ ಗಿರೀಶ್ ಮತ್ತು ಚಾಲಕನನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯನಿಮಿತ್ತ ಇನ್ಸ್ಪೆಕ್ಟರ್ಗಳಾದ ಗಿರೀಶ್ ಮತ್ತು ಆನಂದ್ ಕಬೂರಿ ದಾವಣಗೆರೆಗೆ ಹೋಗಿ ಇಂದು ಮುಂಜಾನೆ ಇನೋವಾ ಕಾರಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಬೆಳಗ್ಗೆ 7 ಗಂಟೆಯಲ್ಲಿ ತುಮಕೂರು
ಹೊರವಲಯದ ಕೊರಾ-ಊರುಕೆರೆ ನಡುವೆ ಇರುವ ಜೈನ್ ಪಬ್ಲಿಕ್ ಶಾಲೆಯ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಅತಿವೇಗವಾಗಿ ಬಂದು ಅಪ್ಪಳಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ.ಗಿರೀಶ್ ಅವರು ಈ ಹಿಂದೆ ಕ್ಯಾತ್ಸಸಂದ್ರ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದು, ನಂತರ ಸಿಸಿಬಿಗೆ ವರ್ಗಾವಣೆಗೊಂಡಿದ್ದರು.ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ, ಸಿಪಿಐ ರವಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.