ಬೆಂಗಳೂರು ,ಜು.11: ನಮ್ಮ ಮೆದುಳನ್ನು ತಿದ್ದುವುದು ದೊಡ್ಡ ಕೆಲಸ ಅಲ್ಲವೇ ಅಲ್ಲ. ಅದಕ್ಕೆ ನಾವೇ ಬೇಕಾದ ಆಕಾರ ನೀಡಬಹುದು. ಟಾನಿಕ್‌ನಿಂದ, ಮಾತ್ರೆಗಳಿಂದ ಆಗದ ಕೆಲಸವನ್ನು ತಾಂತ್ರಿಕ ರೂಪಗಳಿಂದ ಮೆದುಳಿಗೆ ಹೊಳಪು ಕೊಡಬಹುದು. ಈ ನಿಟ್ಟಿನಲ್ಲಿ ನೆರವಾಗುವುದು ಆಯಪ್ಗಳು. ಬುದ್ಧಿಶಕ್ತಿಯನ್ನು ಹೆಚ್ಚಿಸಲೆಂದೇ ಹಲವು ಆಯಪ್ಗಳನ್ನು ಸಿದ್ಧಪಡಿಸಲಾಗಿದೆ. ಅವುಗಳ ಟಾಸ್ಕ್ ಅನ್ನು ನಿರ್ವಹಿಸುತ್ತಾ ಹೋದರೆ, ಮೆದುಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಈ ಸ್ಮಾರ್ಟ್ ಯುಗದಲ್ಲಿ ಮೆದುಳನ್ನು ಸದಾ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವುದೂ ಒಂದು ಕಲೆ. ಆ ಕೆಲಸ ತುಂಬಾ ಯಶಸ್ವಿಯಾಗಿ, ಆಯಾಸವಿಲ್ಲದೆ ಆಗಲು ಆಯಪ್ಗಳು ಸಹಕಾರಿ.
೧. ಲುಮೋಸಿಟಿ (ಔಠಞಟಜಿಠಿ)
ನಿಮ್ಮ ಏಕಾಗ್ರತೆ ಹೆಚ್ಚಿಸಲು, ನಿಮ್ಮನ್ನು ಶಾರ್ಪ್ ಮಾಡಲು, ಹೊಸತನ ಮತ್ತು ತರ್ಕಬದ್ಧವಾಗಿ ಯೋಚಿಸುವಂತೆ ಮಾಡಲು ಇಲ್ಲಿ ಹಲವು ಆಟಗಳಿವೆ. ನಿಮಗಿಷ್ಟವಾದ ವಸ್ತು ವಿಷಯವನ್ನು ಆರಿಸಿಕೊಂಡು ಮುಂದುವರಿಯಬಹುದು. ಎಲ್ಲ ವಯೋಮಾನದವರಿಗೂ ಹೊಂದಿಕೆ ಆಗುವ ಆಯಪ್ ಇದು.
೨. ಫಿಟ್ ಬ್ರೈನ್ಸ್
ನಿಮ್ಮ ಮಾನಸಿಕ ನೈಪುಣ್ಯತೆಯನ್ನು ಹೆಚ್ಚಿಸಲು ಸಹಕಾರಿ. ಮೆದುಳಿನ ಬುದ್ಧಿಶಕ್ತಿಯನ್ನು ವಿಸ್ತರಿಸಲು ಈ ಆಯಪ್ ಸಹಕಾರಿ. ನೆನಪಿಡಬೇಕಾದ ಸಂಗತಿಗಳನ್ನು, ದಿನಾಂಕ, ಪದಗಳು, ಸಾಲುಗಳನ್ನು ನಾವು ನಮೂದಿಸಿದರೆ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಬರುತ್ತವೆ. ಪುನಃ ಆ ವಿಚಾರದಲ್ಲಿ ಆಳವಾಗಿ ಯೋಚಿಸಲು ಪ್ರೇರೇಪಿಸುತ್ತದೆ.
೩. ಏಡೆಟಿಕ್
ಇದು ಮಕ್ಕಳಿಗಾಗಿ ಸಿದ್ಧಪಡಿಸಿರುವ ಆಯಪ್. ಸುಂದರವಾದ ಚಿತ್ರಗಳನ್ನು ಕೊಟ್ಟು ಅವುಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಫ್ಲ್ಯಾಶ್ ಕಾರ್ಡ್ಗಳಿದ್ದು ಉದಾತ್ತವಾದ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕ. ಮಕ್ಕಳ ಕಲಿಕಾ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.
೪. ಮ್ಯೂಸಿಕ್ ಗೇಮ್ ಫಾರ್ ಐಫೋನ್
ಮೊದಲು ಸಂಗೀತದ ಟೋನ್ಸ್ ಅನ್ನು ನಿಮಗೆ ಕೇಳಿಸಿ, ಅದನ್ನೇ ನೀವು ಪ್ಲೇ ಮಾಡಲು ಹೇಳುತ್ತದೆ. ಸಂಗೀತದ ಅಭಿರುಚಿಯನ್ನೂ ಬೆಳೆಸುವುದಲ್ಲದೆ, ಮೆದುಳನ್ನು ಹೊಸತನಕ್ಕೆ ಒಡ್ಡಿಕೊಳ್ಳಲೂ ಪ್ರೇರೇಪಿಸುತ್ತದೆ. ಐಫೋನ್ಗೆ ಮಾತ್ರ ಲಭ್ಯವಿರುವ ಈ ಆಯಪ್, ಸಂಗೀತಪ್ರಿಯರಲ್ಲದವರಿಗೂ ರುಚಿಸುವಂಥದ್ದೇ.
೫. ಬ್ರೈನ್ ವರ್ಕೌಟ್
ಮೆದುಳು ನಿತ್ಯ ವ್ಯಾಯಾಮದಲ್ಲಿ ತೊಡಗುವಂತೆ ನೋಡಿಕೊಳ್ಳುತ್ತದೆ. ಒಂದೇ ಸಂಗತಿಯನ್ನು ವಿವಿಧ ಕೋನಗಳಲ್ಲಿ ಯೋಚಿಸುವಂತೆ ಮಾಡಲು ಇಲ್ಲೊಂದಿಷ್ಟು ಆಟಗಳಿವೆ. ಏಕಾಗ್ರತೆ ಹೆಚ್ಚಿಸುವ ಸಂಗತಿಗಳೂ ಇಲ್ಲಿವೆ. ಬುದ್ಧಿ ಕೌಶಲ್ಯಕ್ಕೆ ಸವಾಲೆಸೆಯುವ ವಿವಿಧ ಆಟಗಳಿಂದ ಮನರಂಜನೆಯೂ ಸಿಗುತ್ತದೆ.
೬. ಮೆಮೊರಿ ಟ್ರೈನ್ಸ್
ನೆನಪಿನ ಶಕ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವ ಈ ಆಯಪ್ನಲ್ಲಿ ಕ್ವಿಝ್ಗಳಿರುತ್ತವೆ. ಅಲ್ಲದೆ, ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಯೋಗ್ಯ ಮಾಹಿತಿಯನ್ನು ಕಲೆಹಾಕುವ ಗುಣವನ್ನೂ ಇದು ಹೇಳಿಕೊಡುತ್ತದೆ. ಪ್ರತಿ ಲೆವೆಲ್ ದಾಟುತ್ತಿದ್ದಂತೆ ಹೊಸ ಹೊಸ ಸವಾಲುಗಳಿಗೆ ಮೆದುಳು ತಯಾರುಗೊಳ್ಳಬೇಕಾಗುತ್ತದೆ.
೭. ಬ್ರೈನ್ ಸ್ಕೂಲ್
ಇಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿವಿಧ ರೀತಿಯ ಆಟಗಳಿದ್ದು, ಪ್ರತಿಯೊಂದು ಆಟಕ್ಕೂ ನೂರಕ್ಕು ಹೆಚ್ಚು ಹಂತಗಳಿವೆ. ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮೂಲ ಪರಿಕಲ್ಪನೆಗಳ ಮಾಹಿತಿಗಳನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡಿ, ಮೆದುಳಿನ ಕೌಶಲ್ಯವನ್ನು ಹೆಚ್ಚಿಸುತ್ತದೆ.
೮. ಸುಡೋಕು
ದಿನ ಪತ್ರಿಕೆ, ಮ್ಯಾಗಜಿನ್ಗಳಲ್ಲಿ ಇರುವ ಸುಡೋಕುಗಳಂತೆ ಇದು ಕೂಡ. ಇಲ್ಲಿ ಜಟಿಲ ಸಮಸ್ಯೆಗಳನ್ನು ಬಗೆಹರಿಸುತ್ತಾ ಹೋದಂತೆ ನಿಮ್ಮ ಬೌದ್ಧಿಕ ಸಾಮರ್ಥ್ಯ ಬಲಗೊಳ್ಳುತ್ತದೆ. ಇಲ್ಲಿ ಪೆನ್ಸಿಲ್ ಆಪ್ಷನ್ ಇದ್ದು, ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಬಹುದು.
೯. ಖಾನ್ ಅಕಾಡೆಮಿ
ಗ್ರಂಥಾಲಯದ ಅನುಭವ ನೀಡುವ ಆಯಪ್. ಸುಮಾರು ೪೨೦೦ಕ್ಕೂ ಹೆಚ್ಚು ವಿಡಿಯೋಗಳು ಮತ್ತು ಕೃತಿಗಳು ಲಭ್ಯ ಇವೆ. ಕುಳಿತಲ್ಲೆ ಇಷ್ಟವಾದ ವಿಷಯಗಳನ್ನು ಆಯ್ಕೆಮಾಡಿ ಬೇಕಾದ ಮಾಹಿತಿಯನ್ನು ಪಡೆದು ಮೆದುಳನ್ನು ಹೊಳಪೇರಿಸಿಕೊಳ್ಳಬಹುದು. ಜೀವಶಾಸ್ತ್ರ, ಗಣಿತ, ಇತಿಹಾಸಕ್ಕೆ ಸಂಬಂಧಿಸಿದಂತೆ ಮಾಹಿತಿಗಳಿದ್ದು ವಿದ್ಯಾರ್ಥಿಗಳಿಗೆ ಒಳ್ಳೆಯ ಆಯಪ್.
೧೦. ಬ್ರೈನ್ ಎಚ್ಕ್ಯೂ
ಬುದ್ಧಿಮಾಂದ್ಯ ಮಕ್ಕಳಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಆಯಪ್. ಮಾನಸಿಕ ಅಸ್ವಸ್ಥತೆಯ ಆಧಾರದ ಮೇಲೆ, ಅಂಥವರ ಮೆದುಳನ್ನು ಸರಿ ದಾರಿಗೆ ತರಲು ಈ ಆಯಪ್ ಸಹಕಾರಿ. ಇಲ್ಲೂ ಒಂದಿಷ್ಟು ಆಟಗಳಿವೆ. ಹೆಚ್ಚು ವೇಗವಿಲ್ಲದ ಈ ಆಟಗಳಲ್ಲಿ ಬಣ್ಣಗಳಿಗೆ ಆದ್ಯತೆ ನೀಡಲಾಗಿದೆ.
ವರದಿ : ಪಲ್ಲವಿ

Comments are closed.