
ಬೆಂಗಳೂರು: ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಪ್ರಥಮ ಚಿಕಿತ್ಸೆ ಕೊಡಿಸುವುದ ಮೂಲಕ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ತಮ್ಮ ಜವಾಬ್ದಾರಿ ಮೆರೆದಿದ್ದಾರೆ.
ಬೆಂಗಳೂರಿನ ಸಂಜಯನಗರದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಸಂಜಯನಗರ ಸಿಗ್ನಲ್ ಬಳಿ ಹಿಂಬದಿಯಿಂದ ಬಂದ ಸ್ಕೂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರನ ಕಾಲಿಗೆ ಗಾಯವಾಗಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೇಂದ್ರ ಸಚಿವ ಡಿವಿ ಸದಾನದಂಗೌಡ ಅವರು ಇದನ್ನು ಗಮನಿಸಿ ಕೂಡಲೇ ಕಾರನ್ನು ನಿಲ್ಲಿಸಿ ಗಾಯಾಳು ವ್ಯಕ್ತಿಗೆ ತಮ್ಮ ಸರ್ಕಾರಿ ಕಾರಿನಲ್ಲಿದ್ದ ಫಸ್ಟ್ ಏಡ್ ಬಾಕ್ಸ್ ನಿಂದ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ಅಲ್ಲದೆ ಬಳಿಕ ಗಾಯಾಳು ವ್ಯಕ್ತಿಯನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿ ತಮ್ಮ ಜವಾಬ್ದಾರಿ ಮೆರೆದಿದ್ದಾರೆ.
ಬಳಿಕ ಮಾತನಾಡಿದ ಡಿವಿ ಸದಾನಂದಗೌಡ ಅವರು, “ರಸ್ತೆಯಲ್ಲಿ ಜನ ಸೇರಿದ್ದನ್ನು ಗಮನಿಸಿ ಕಾರನ್ನು ನಿಲ್ಲಿಸಲು ಹೇಳಿದೆ. ಬಳಿಕ ಅಪಘಾತದ ವಿಚಾರ ತಿಳಿದು ಕಾರಿನಲ್ಲಿದ್ದ ಪ್ರಥಮ ಚಿಕಿತ್ಸೆ ಕಿಟ್ ತರಿಸಿ ಗಾಯವಾಗಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದೇನೆ. ಇದು ನಾನು ಮಾಡಿದ ಸಹಾವಲ್ಲ. ಬದಲಿಗೆ ಇದು ನನ್ನ ಜವಾಬ್ದಾರಿಯಷ್ಟೇ. ಅಪಘಾತವಾದ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸುವುದು ದೇಶದ ಎಲ್ಲ ನಾಗರಿಕರ ಕರ್ತವ್ಯವಾಗಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟಾರೆ ನೆಲಮಂಗಲ ಮತ್ತು ಮೈಸೂರು ಅಪಘಾತ ಪ್ರಕರಣಗಳ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿದ್ದ ಮಂದಿಗೆ ಕೇಂದ್ರ ಸಚಿವ ಸದಾನಂದಗೌಡರ ಈ ಕಾರ್ಯ ನಿಜಕ್ಕೂ ಮಾದರಿಯಂತಿದೆ.
Comments are closed.