ಕರ್ನಾಟಕ

ಬಿಎಸ್ ವೈ v/s ಈಶ್ವರಪ್ಪ; ಬಿಜೆಪಿ ಅತೃಪ್ತರಿಂದ ಆರ್ ಎಸ್ಎಸ್ ಗೆ ದೂರು

Pinterest LinkedIn Tumblr

Eshuಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಅಸಮಾಧಾನದ ಕುರಿತಂತೆ ಬಿಜೆಪಿ ಅತೃಪ್ತರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ಗೆ ದೂರು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಮತ್ತೊಂದೆಡೆ ಶನಿವಾರ ನಡೆಯಲಿರುವ ಬಿಜೆಪಿ ಪದಾಧಿಕಾರಿಗಳ ಸಭೆಗೆ ಗೈರುಹಾಜರಾಗಲು ಕೆಎಸ್ ಈಶ್ವರಪ್ಪ ನಿರ್ಧರಿಸಿದ್ದಾರೆ.

ಪಕ್ಷದ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ ಆರ್ ಎಸ್ ಎಸ್ ಸೂಚಿಸಿದವರನ್ನೂ ಪರಿಗಣಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಆರ್ ಎಸ್ ಎಸ್ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಬಿಜೆಪಿ ಅತೃಪ್ತರು ದೂರು ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.

ಈಶ್ವರಪ್ಪ ನಿವಾಸದಲ್ಲಿ ಮಹತ್ವದ ಸಭೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆಯಲಿರುವ ಪಕ್ಷದ ಪದಾಧಿಕಾರಿಗಳು, ಶಾಸಕ, ಸಂಸದರ ಸಭೆಯಲ್ಲಿ ಭಾಗವಹಿಸಬೇಕೆ, ಬೇಡವೇ ಎಂಬ ಬಗ್ಗೆ ಕೆಎಸ್ ಈಶ್ವರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಿತು.

ಈಶ್ವರಪ್ಪ ಗೈರು, ಅತೃಪ್ತರು ಭಾಗಿ:
ಶನಿವಾರ ನಡೆಯಲಿರುವ ಪದಾಧಿಕಾರಿಗಳ ಸಭೆಗೆ ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಗೈರುಹಾಜರಾಗಲು ಸಭೆಯಲ್ಲಿ ನಿರ್ಧರಿಸಿದ್ದು, ಅತೃಪ್ತ ಮುಖಂಡರು ಸಭೆಯಲ್ಲಿ ಭಾಗವಹಿಸುವ ತೀರ್ಮಾನವನ್ನು ಶನಿವಾರ ಈಶ್ವರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಸಿದೆ.

ಶೋಭಾ ಬಾಯಿಗೆ ಬೀಗ ಹಾಕಿಸಬೇಕು:
ನಾಳೆ ನಡೆಯಲಿರುವ ಬಿಜೆಪಿ ಪದಾಧಿಕಾರಿಗಳ ಸಭೆಗೆ ಹಾಜರಾಗಿ, ಸಂಸದೆ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಲು ಈಶ್ವರಪ್ಪ ಬಣ ನಿರ್ಧರಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಶೋಭಾ ಕರಂದ್ಲಾಜೆ ಎಲ್ಲಾ ಚಾನೆಲ್ ಗೂ ಸಂದರ್ಶನ ಕೊಟ್ಟು, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಶೋಭಾ ಬಾಯಿಗೆ ಬೀಗ ಹಾಕುವಂತೆ ವರಿಷ್ಠರಿಗೆ ದೂರು ನೀಡಬೇಕೆಂದು ಸಭೆಯಲ್ಲಿ ಹಲವು ಮುಖಂಡರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
-ಉದಯವಾಣಿ

Comments are closed.