ಕರ್ನಾಟಕ

ತಾಯಿಯ ಸರಕದ್ದ ಕಳ್ಳ ಮಗನಿಗೆ ಸಿಕ್ಕಿ ಬಿದ್ದ

Pinterest LinkedIn Tumblr

chain-snatching-brings-hope-715x400ಬೆಂಗಳೂರು, ಜೂ. ೨೩- ತಾಯಿಯ ಮಾಂಗಲ್ಯ ಸರ ಕಸಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಸರಗಳ್ಳನೊಬ್ಬನನ್ನು ಮಗ ಹಿಡಿದು ಯಲಹಂಕ ಪೊಲೀಸರಿಗೆ ಒಪ್ಪಿಸಿದ್ದಾನೆ. ಸರಗಳ್ಳ ನವೀನ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಹುಣಸಮಾರನಹಳ್ಳಿಯ ಭರತ್ ನಗರದಲ್ಲಿ ಕುಸುಮಾ ಪೂನಿಯ ಹಾಗೂ ಲೀತ ಶರ್ಮಾ ಎಂಬ ಇಬ್ಬರು ಮಹಿಳೆಯರು ಕಳೆದ ಜೂ. 21ರ ಮಧ್ಯಾಹ್ನ 3ರ ವೇಳೆ ದೇವಸ್ಥಾನಕ್ಕೆ ಹೋಗಿ ಮನೆಗೆ ನಡೆದುಕೊಂಡು ಬರುತ್ತಿದ್ದರು.
ಸಣ್ಣದಾಗಿ ಮಳೆ ಬರುತ್ತಿದ್ದ ಕಾರಣ ಕೊಡೆ ಹಿಡಿದುಕೊಂಡು ಇವರಿಬ್ಬರು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಸರಗಳ್ಳ ನವೀನ ಮೊದಲಿಗೆ ಲಿತಾ ಶರ್ಮಾ ಅವರ ಕತ್ತಿನಲ್ಲಿರುವ ಸರ ಕಸಿಯಲು ಯತ್ನಿಸಿದ್ದಾನೆ. ಪ್ರತಿರೋಧ ತೋರಿದ ಶರ್ಮಾ, ಕೈಯಲ್ಲಿದ್ದ ಕೊಡೆಯಿಂದ ಆತನಿಗೆ ಹೊಡೆದಿದ್ದಾಳೆ.
ಕೂಡಲೇ ಆತ ಮುಂದೆ ಹೋಗುತ್ತಿದ್ದ ಕುಸುಮಾ ಪೂನಿಯ ಅವರ ಸರ ಕದಿಯಲು ಯತ್ನಿಸಿದ್ದು, ಆಕೆ ಕೂಡ ಪ್ರತಿರೋಧ ತೋರಿದಾಗ ಕೆಳಗೆ ಬಿದ್ದು ಸಹಾಯಕ್ಕಾಗಿ ಕೂಗಿದಾಗ ಆತ ಪರಾರಿಯಾಗಿದ್ದಾನೆ.
ಮನೆಗೆ ಬಂದ ಕುಸುಮಾ ಪೂನಿಯ ಆದ ಘಟನೆಯನ್ನು ಕಾಲೇಜು ವಿದ್ಯಾರ್ಥಿಯಾಗಿದ್ದ ಪಂಕಜ್ ಸಿಂಗ್‌ಗೆ ತಿಳಿಸಿ ಸರಗಳ್ಳನ ಚಹರೆಯನ್ನು ವಿವರಿಸಿದ್ದಾರೆ.
ಕೂಡಲೇ ಆತ ಘಟನೆ ನಡೆದ ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸಿ ಸ್ವಲ್ಪ ದೂರದಲ್ಲೇ ಇದ್ದ ಕನ್ವೆನ್‌ಷನ್ ಹಾಲ್‌ನ ಪ್ರಾವಿಷನ್ ಸ್ಟೋರ್‌ನ ಮುಂದೆ ನಿಂತು ಸಿಗರೇಟು ಸೇದುತ್ತಿದ್ದ ಯುವಕನೊಬ್ಬನನ್ನು ಗಮನಿಸಿದಾಗ ಆತ ತಾಯಿ ಹೇಳಿದ ಚಹರೆಗೆ ಹೋಲುತ್ತಿದ್ದ.
ತಕ್ಷಣವೇ ಅಲ್ಲಿಗೆ ಹೋದ ಪಂಕಜ್ ಸಿಂಗ್ ಸರಗಳ್ಳನನ್ನು ಹಿಡಿದು ತಾಯಿಯನ್ನು ಅಲ್ಲಿಗೆ ಕರೆಸಿಕೊಂಡು ಸಾರ್ವಜನಿಕರ ಸಹಾಯದಿಂದ ಯಲಹಂಕ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾನೆ. ವಿಚಾರಣೆಯಲ್ಲಿ ಆತ ನವೀನ ಎಂದು ತಿಳಿದು ಬಂದಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Comments are closed.