ಕರ್ನಾಟಕ

ಮಹಿಳೆ ಉದ್ದಿಮೆದಾರರ ನೆರವಿಗೆ ಮಹಿಳಾ ಪಾರ್ಕ್ ಪ್ರಾರಂಭ

Pinterest LinkedIn Tumblr

9j10clrಬೆಂಗಳೂರು, ಜೂ. ೯- ಮಹಿಳಾ ಉದ್ದಿಮೆದಾರರಿಗೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ಸರ್ಕಾರ ಸಿದ್ದವಿದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ-ಧಾರವಾಡ ಹಾಗೂ ಕನಕಪುರ ತಾಲ್ಲೂಕಿನ ಹಾರೋವಳ್ಳಿಯಲ್ಲಿ `ಮಹಿಳಾ ಪಾರ್ಕ್’ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಹಾರೋವಳ್ಳಿಯಲ್ಲಿ 100 ಎಕರೆ ಜಮೀನನ್ನೂ ಮಹಿಳಾ ಪಾರ್ಕ್‌ಗಾಗಿ ಮೀಸಲಿಡಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಆರಂಭಿಸಲಿರುವ ಕೈಗಾರಿಕಾ ಪಾರ್ಕ್‌ಗಳು ಹಾಗೂ ಕೈಗಾರಿಕಾ ವಸಾಹತುಗಳಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಶೇ. 5 ರಷ್ಟು ಮೀಸಲು ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಮಹಿಳಾ ಉದ್ದಿಮೆದಾರರ ಸಂಘ ನಗರದಲ್ಲಿಂದು ಆಯೋಜಿಸಿದ್ದ ಎಮರ್ಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಉದ್ದಿಮೆದಾರರಿಗೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ಹಲವು ನೀತಿಗಳನ್ನು ತರಲಾಗಿದೆ. ಅಲ್ಲದೆ, 2014-19ರ ಕೈಗಾರಿಕಾ ನೀತಿಯಲ್ಲೂ ಕೂಡ ಹಲವು ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. ರಾಜ್ಯದ ಕೈಗಾರಿಕಾ ಪಾರ್ಕ್‌ಗಳು ಮತ್ತು ವಸಾಹತುಗಳಲ್ಲಿ ಶೇ. 5 ರಷ್ಟು ಶೆಡ್ಡು ಸೇರಿದಂತೆ ಇತರ ಸೌಲಭ್ಯಗಳನ್ನು ಮಹಿಳಾ ಉದ್ದಿಮೆದಾರರಿಗೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಮುಂದೆ ಬರುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಮಾನ ಅವಕಾಶಗಳು ಸಿಗುತ್ತಿವೆ. ಮಹಿಳೆಯರೂ ಕೂಡ ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುತ್ತಿದ್ದಾರೆ ಎಂದರು.
ಕರ್ನಾಟಕದಲ್ಲಿ ಮಹಿಳಾ ಉದ್ದಿಮೆದಾರರಿಗೆ ದೇಶದಲ್ಲೇ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ. ಹೀಗಾಗಿ ದೇಶದಲ್ಲಿ ರಾಜ್ಯ ಮೂರನೇ ಸ್ಥಾನ ಪಡೆದಿದೆ. ಇಲ್ಲಿ ಒಂದು ಲಕ್ಷ ಮೂರು ಸಾವಿರ ಮಂದಿ ಮಹಿಳಾ ಉದ್ದಿಮೆದಾರರಿದ್ದಾರೆ ಎಂದು ಹೇಳಿದರು.
ಮಹಿಳಾ ಉದ್ದಿಮೆದಾರರ ಸಬಲೀಕರಣ ಮತ್ತು ಅವರ ಅಭಿವೃದ್ಧಿಗಾಗಿ ಸರ್ಕಾರ ಎಲ್ಲಾ ಸಹಾಯವನ್ನು ನೀಡಲಾಗುವುದು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳಾ ಉದ್ದಿಮೆದಾರರು ಇನ್ನಷ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆ ಮೂಲಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.
ಮಹಿಳಾ ಸಮಾನತೆ ಸಾಧಿಸುವ ಸಲುವಾಗಿ ಸರ್ಕಾರ ಎಲ್ಲಾ ನೆರವನ್ನು ನೀಡಲು ಉದ್ದೇಶಿಸಿದೆ ಎಂದ ಅವರು, ಎಮರ್ಜ್ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರಪ್ಪ ನಾಯ್ಡು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಎಮರ್ಜ್ ಸಂಘಟನೆಯ ರಾಜಲಕ್ಷ್ಮಿ. ಆರ್, ಸಂಸ್ಥಾಪಕ ಅಧ್ಯಕ್ಷೆ ಉಮಾರೆಡ್ಡಿ, ರಾಷ್ಟ್ರೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ನಾಥ್ ಸೇರಿದಂತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ವಿವಿಧ ಮಹಿಳಾ ಉದ್ದಿಮೆದಾರರೂ ಸೇರಿದಂತೆ, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.