ಕರ್ನಾಟಕ

ಪರಿಶ್ರಮವೇ ಯಶಸ್ವಿಗೆ ಮೆಟ್ಟಿಲು ವಿದ್ಯಾರ್ಥಿಗಳಿಗೆ ಹಿತ ವಚನ

Pinterest LinkedIn Tumblr

bbಬೆಂಗಳೂರು, ಜೂ. ೭- ಕಠಿಣ ಪರಿಶ್ರಮವೊಂದೇ ಯಶಸ್ಸಿನ ಮಾರ್ಗ. ಅದೊಂದೇ ನಿಮ್ಮನ್ನು ಜಯದ ಶಿಖರಕ್ಕೆ ಕೊಂಡೊಯ್ಯಬಲ್ಲದು. ಸಹನೆ, ಪ್ರಯತ್ನ, ಗ್ರಹಿಕೆ ಪರಿಪೂರ್ಣತೆಯ ಮೂಲಕ ಸಾಧನೆ ಮಾಡಿ ವೈಫಲ್ಯಗಳ ಬಗ್ಗೆ ಚಿಂತಿಸದೆ, ಅದರಿಂದ ಪಾಠ ಕಲಿಯಿರಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನ ಅಧ್ಯಕ್ಷ ಪ್ರೊ. ಅನಿಲ್.ಡಿ. ಸಹಸ್ರಬುದೆ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.
ವೈಫಲ್ಯಗಳಿಗೆ ಕಾರಣವಾದ ತಪ್ಪುಗಳನ್ನು ಮತ್ತೆ ಮಾಡಬೇಡಿ. ಬದುಕಿನಲ್ಲಿ ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಯಶಸ್ಸನ್ನು ಸಾಧಿಸಲು ಅನೈತಿಕ ಅಥವಾ ವೃತ್ತಿ ಕೊರತೆಗೆ ವರದಾನ. ಯಾವುದೇ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಿವಿಮಾತು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಹೊರಗಿನ ಜಗತ್ತು ನಿಮ್ಮ ಮನೆ ಅಥವಾ ವಿಶ್ವವಿದ್ಯಾಲಯದಂತೆ ಸುರಕ್ಷಿತ ಸ್ಥಳವಲ್ಲ. ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಿರಲಿ. ಎದುರಾಗುವ ಸವಾಲುಗಳನ್ನು ನಗುಮುಖದಿಂದ ಸ್ವೀಕರಿಸಿ ಎಂದು ಹೇಳಿದರು.
ಪದವಿ ಪಡೆದಿರುವ ಕೆಲವರು ನೌಕರಿ ಹುಡುಕಿಕೊಂಡು ಹೋಗಬಹುದು. ಕೆಲವರು ಸಂಶೋಧನೆಯನ್ನು ಅರಸಿ ಹೊರಡಬಹುದು. ಇನ್ನೂ ಕೆಲವರು ನಾಗರಿಕ ಸೇವೆ ಇಲ್ಲವೆ ವಿವಿಧೆಡೆಗೆ ಹಂಚಿ ಹೋಗಬಹುದು. ಯಾವುದೇ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಿ. ಅದಕ್ಕೆ ಬದುಕಿನ ಗುರಿಯನ್ನು ನಿಗದಿಪಡಿಸಿಕೊಳ್ಳಿ. ಅದನ್ನು ಸಾಕಾರ ಮಾಡಿಕೊಳ್ಳಲು ಬೇಕಾದ ಭಾವನೆ ಮತ್ತು ಬದ್ಧತೆಯನ್ನು ಬಳಸಿಕೊಳ್ಳಿ. ನೀವು ಬಯಸುವ ಅವಕಾಶಗಳನ್ನು ಹುಡುಕುವುದು ಮತ್ತು ನಿರಂತರ ಪ್ರಯತ್ನಶೀಲತೆಯನ್ನು ಎಂದೂ ಕೈಬಿಡಬೇಡಿ ಎಂದು ಹೇಳಿದರು.
ಯಶಸ್ಸು ಪಡೆಯಬೇಕಾದರೆ, ನೀವು ಆರೋಗ್ಯವಂತರಾಗಿರಬೇಕು. ಮಾಡುವ ಕೆಲಸ ಸಾಮರ್ಥ್ಯದಿಂದ ಕೂಡಿರಬೇಕು. ಆಗ ಮಾತ್ರ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಯಾವುದೇ ಕ್ಷೇತ್ರದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳಿ. ಆದರೆ ಪ್ರತಿಯೊಬ್ಬರೂ ದೇಶದ ಉನ್ನತಿಗೆ ಕೊಡುಗೆಯನ್ನು ನೀಡುವುದನ್ನು ಮರೆಯದಿರಿ ಎಂದು ಸಲಹೆ ಮಾಡಿದರು.
ಪಂಚಸೂತ್ರ ಅಳವಡಿಕೆ
ವಿಶ್ವವಿದ್ಯಾಲಯಗಳು ಹೆಚ್ಚಿನ ಸಾಧನೆ ಮಾಡಬೇಕಾದರೆ, ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಶೇಕಡವಾರು ಹೆಚ್ಚಬೇಕಾದರೆ, ವಿಶ್ವವಿದ್ಯಾಲಯಗಳು ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಅವುಗಳೆಂದರೆ, ಕೈಗಾರಿಕಾ ಸಂಯೋಜನೆ, ಸಂಶೋಧನೆ ಮತ್ತು ಅನ್ವೇಷಣೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಲ ಸಂಪರ್ಕ, ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವ 5 ಸೂತ್ರಗಳನ್ನು ಅಳವಡಿಸಿಕೊಂಡರೆ, ಯಾವುದೇ ವಿಶ್ವವಿದ್ಯಾಲಯ ಪ್ರಗತಿಯ ಉನ್ನತಿಗೆ ಸಹಕಾರಿಯಾಗಲಿದೆ.
ಹಾಗೆಯೇ ವಿದ್ಯಾರ್ಥಿಗಳ ಬೆಳವಣಿಗೆಯತ್ತಲೂ ಗಮನ ಹರಿಸಬೇಕು ಎಂದು ಹೇಳಿದರು.
ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಇಂದು ಕಲಿತದ್ದು ನಾಳೆಗೆ ಬಹುಬೇಗ ಸವಕಲಾಗುತ್ತದೆ. ಹೀಗಾಗಿ ನಿರಂತರ ಅಧ್ಯಯನಕ್ಕೆ ಒತ್ತು ಕೊಡಿ. ಕಲಿಕೆಗೆ ಕೊನೆಯಿಲ್ಲ ಎಂದರು.
2020ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಶೇಕಡವಾರು 30ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದು, ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡರೆ, ಸಾಧನೆ ಗುರಿ ಮುಟ್ಟುವುದು ಕಷ್ಟವೇನಲ್ಲ ಎಂದು ಹೇಳಿದರು.

Comments are closed.