ಕರ್ನಾಟಕ

ಪೊಲೀಸರಿಗೆ ದಿಢೀರ್‌ ಭರ್ಜರಿ ಕೊಡುಗೆ

Pinterest LinkedIn Tumblr

dr-g-parameshwarಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆಗೆ ಕ್ರಮ. ವಾರದ ರಜೆ ಕಡ್ಡಾಯ. ಆರೋಗ್ಯ ಭಾಗ್ಯದಡಿ “ಸ್ಮಾರ್ಟ್‌ ಕಾರ್ಡ್‌’ ವಿತರಣೆ. ಪಡಿತರದ ಬದಲು ಹಣ. ಎರಡು ವರ್ಷಗಳಲ್ಲಿ 15 ಸಾವಿರ ಪೊಲೀಸ್‌ ಸಿಬ್ಬಂದಿ ನೇಮಕ. 2018ರೊಳಗೆ ಪೊಲೀಸರಿಗಾಗಿ 11 ಸಾವಿರ ಮನೆಗಳ ನಿರ್ಮಾಣ…

ಪೊಲೀಸರ ಸಂಭಾವ್ಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸುವ ರೂಪದಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ಯೋಜನೆ ಮತ್ತು ಕಾರ್ಯಕ್ರಮಗಳ ಪಟ್ಟಿ ಇದು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಯೋಜನೆ ಮತ್ತು ಕಾರ್ಯಕ್ರಮಗಳ ವಿವರಣೆ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಪೊಲೀಸರ ಬೇಡಿಕೆಗಳ ಬಗ್ಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದು, ಈಗಾಗಲೇ ಅನೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಆರ್ಥಿಕ ಮತ್ತು ಕಾನೂನು ಅಂಶಗಳು ಅಡಕವಾಗಿರುವ ಕೆಲವೊಂದು ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ವೇತನ ಪರಿಷ್ಕರಣೆ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಇದೆ. ನೆರೆ ರಾಜ್ಯಗಳಲ್ಲಿ ಕೆಲವೆಡೆ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ್ದರಿಂದ ಮತ್ತು ತುಟ್ಟಿ ಭತ್ಯೆಗಳನ್ನು ಮೂಲ ವೇತನದಲ್ಲಿ ಸೇರಿಸಲಾಗಿರುವುದರಿಂದ ವೇತನದಲ್ಲಿ ತಾರತಮ್ಯ ಕಂಡು ಬರುತ್ತಿದೆ. ಶೀಘ್ರದಲ್ಲೇ ವೇತನ ಆಯೋಗ ಸಹ ಬರಲಿಕ್ಕಿದ್ದು, ಅದರ ನಂತರ ವೇತನ ಪರಿಷ್ಕರಣೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅದೇ ರೀತಿ ವಾರದ ರಜೆ ಕಡ್ಡಾಯಗೊಳಿಸಲಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿ ತನ್ನ ವಾರದ ರಜೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಮತ್ತು ಮೇಲಾಧಿಕಾರಿಗಳು ಕಡ್ಡಾಯವಾಗಿ ರಜೆ ನೀಡಬೇಕು. ಆರೋಗ್ಯ ಭಾಗ್ಯದಡಿ ಸ್ಮಾರ್ಟ್‌ಕಾರ್ಡ್‌ ನೀಡುವ ಬಗ್ಗೆ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದು, ಸದ್ಯದಲ್ಲೇ ಅದನ್ನು ಕಾರ್ಯರೂಪಕ್ಕೆ ತರಲಾಗುವುದು. ಪಡಿತರ ಬದಲು ಅದಕ್ಕೆ ತಗಲುವ ಹಣ ಕೊಡಬೇಕು ಎಂದು ಬೇಡಿಕೆ ಬಹುದಿನದಿಂದ ಇತ್ತು. ಮುಂದಿನ ದಿನಗಳಲ್ಲಿ ಪಡಿತರದ ಬದಲು ಅದರ ಹಣವನ್ನು ಸಿಬ್ಬಂದಿಯ ವೇತನದಲ್ಲಿ ಸೇರಿಸಿ ಕೊಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಪರಮೇಶ್ವರ್‌ ಭರವಸೆ ನೀಡಿದರು.

15 ಸಾವಿರ ಪೊಲೀಸರ ಭರ್ತಿ: 2008ರಿಂದ 2013ರವರೆಗೆ 16 ಸಾವಿರ ಪೊಲೀಸ್‌ ಸಿಬ್ಬಂದಿ ಹುದ್ದೆಗಳು ಬ್ಯಾಕ್‌ಲಾಗ್‌ ರೂಪದಲ್ಲಿ ಖಾಲಿ ಇದ್ದವು. ಹೊಸ ಸರ್ಕಾರ ಬಂದ ಮೇಲೆ ಕಳೆದ ಮೂರು ವರ್ಷಗಳಲ್ಲಿ 14 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದಲ್ಲದೇ ಮುಂದಿನ ಎರಡು ವರ್ಷಗಳಲ್ಲಿ 15 ಸಾವಿರ ಪೊಲೀಸರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ವರ್ಷಕ್ಕೆ ಸರಾಸರಿ 3 ಸಾವಿರ ಪೊಲೀಸ್‌ ಹುದ್ದೆಗಳು ಖಾಲಿ ಆಗುತ್ತವೆ. ಆಯಾ ವರ್ಷದಲ್ಲಿ ಖಾಲಿಯಾದ ಹುದ್ದೆಗಳನ್ನು ಅದೇ ವರ್ಷದಲ್ಲಿ ಭರ್ತಿ ಮಾಡಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಆಗ ಕೆಲಸದ ಒತ್ತಡ ತನ್ನಿಂತಾನೆ ಕಡಿಮೆ ಆಗಲಿದೆ ಎಂದು ತಿಳಿಸಿದರು.

2 ವರ್ಷಗಳಲ್ಲಿ 11 ಸಾವಿರ ಮನೆ: ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಕಳೆದ ಮೂರು ವರ್ಷಗಳಲ್ಲಿ 659 ಕೋಟಿ ರೂ. ವೆಚ್ಚದಲ್ಲಿ 4,316 ಮನೆಗಳನ್ನು ನಿರ್ಮಿಸಲಾಗಿದೆ. ಈಗ 1,816 ಕೋಟಿ ರೂ. ವೆಚ್ಚದಲ್ಲಿ 11 ಸಾವಿರ ಮನೆಗಳ ನಿರ್ಮಾಣಕ್ಕೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದೆ. ಪ್ರಸಕ್ತ ವರ್ಷ 4,016 ಮನೆಗಳ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಸಿ 10 ತಿಂಗಳಲ್ಲಿ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ 450 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೇ ಹುಡ್ಕೊàದಿಂದ 200 ಕೋಟಿ ರೂ. ಸಾಲ ಪಡೆದಿ 4,198 ಮನೆಗಳ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಈ ರೀತಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 11 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
-ಉದಯವಾಣಿ

Comments are closed.