ಕರ್ನಾಟಕ

ಮರಿಗೆ ಜನ್ಮನೀಡಿ ಆನೆ ಪರಾರಿ!

Pinterest LinkedIn Tumblr

elephantಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಸೇರಿದ ಮಳೆಯೂರು ವನ್ಯಜೀವಿ ವಲಯದಲ್ಲಿ ಆರೋಗ್ಯವಂತ ನವಜಾತ ಗಂಡಾನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟಿರುವ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.

ಮಳೆಯೂರು ವನ್ಯಜೀವಿ ವಲಯದ ಬಂಕವಾಡಿ ಎಂಬ ಕಾಡಂಚಿನ ಗ್ರಾಮದ ಬಳಿ ಆನೆ ಕಂದಕವೊಂದರಲ್ಲಿ ಮರಿಯಾನೆ ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿದೆ. ತಕ್ಷಣ ಸಿಬ್ಬಂದಿಯು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಹರೀಶ್‌, ಎಸಿಎಫ್‌ಗಳಾದ ಪೂವಯ್ಯ, ಮರಡೀಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ‘ತಾಯಿ ಆನೆಯು ಮರಿಗೆ ಜನ್ಮ ನೀಡಿದ ನಂತರ ಜನರನ್ನು ನೋಡಿ ಗಾಬರಿಯಿಂದ ಕಂದಕದಲ್ಲಿಯೇ ಮರಿ ಬಿಟ್ಟು ಓಡಿ ಹೋಗಿದೆ’ ಎಂದು ಆರ್‌ಎಫ್‌ಒ ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಾವು ನೂರಾರು ಮೀಟರ್‌ ದೂರದವರೆಗೂ ತಾಯಿ ಆನೆಗೆ ಹುಡುಕಾಟ ನಡೆಸಿದ್ದು, ತಾಯಿ ಆನೆ ಗುರುತಿಸಿದ್ದೇವೆ ಎಂದು ತಿಳಿಸಿದರು. ಈಗ ಮರಿಯಾನೆ ಅರಣ್ಯ ಇಲಾಖೆಗೆ ಸೇರಿದ ಸೋಲಾರ್ ಶೆಡ್‌ನಲ್ಲಿದೆ. ಅದಕ್ಕೆ ಹಸುವಿನ ಹಾಲು ಕುಡಿಸಿ ಉಪಚರಿಸಲಾಗುತ್ತಿದೆ. ತಾಯಿ ಆನೆ ಸುಳಿಯದಿದ್ದಲ್ಲಿ ಮರಿಯಾನೆ ಬಗ್ಗೆ ಈಗಲೇ ಏನೂ ಹೇಳಲಾಗದು. ಡಾ.ನಾಗರಾಜು ಮಾರ್ಗದರ್ಶನದಂತೆ ಮರಿಯಾನೆಗೆ ಆರೈಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Comments are closed.