ಕರ್ನಾಟಕ

ಬಿಜೆಪಿ-ಜೆಡಿಎಸ್ ಮೈತ್ರಿ ಗೋತಾ

Pinterest LinkedIn Tumblr

BJP-JDS-Maitriಬೆಂಗಳೂರು, ಜೂ. ೩- ವಿಧಾನ ಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಇದುವರೆಗೂ ಸ್ಪಷ್ಟ ತೀರ್ಮಾನವಾಗದ ಹಿನ್ನೆಲೆಯಲ್ಲಿ `ಚುನಾವಣಾ ಸಂಘರ್ಷ’ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಕೊನೆಯದಿನವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಲಕ್ಷಣಗಳು ಕಂಡುಬಂದಿಲ್ಲ.
ಬಿಜೆಪಿ ಹಾಗೂ ಜೆಡಿಎಸ್‌ನಿಂದ ರಾಜ್ಯಸಭೆ ಚುನಾವಣೆಗೆ ತಲಾ ಒಬ್ಬರು, ವಿಧಾನ ಪರಿಷತ್ ಚುನಾವಣೆಗೆ ತಲಾ ಇಬ್ಬರು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಚುನಾವಣೆ ಎದುರಿಸುವ ಅನಿವಾರ್ಯತೆ ಎದುರಾಗಿದೆ.
ರಾಜ್ಯಸಭೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಬಿ.ಎಂ. ಫಾರೂಕ್ ನಾಮಪತ್ರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭ್ಯರ್ಥಿಯಾಗಿದ್ದು, ಅವರನ್ನು ಆಯ್ಕೆ ಮಾಡಿಕಳುಹಿಸುವ ಜವಾಬ್ದಾರಿ ಪಕ್ಷದ ನಾಯಕರ ಮೇಲಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅವರ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುವಲ್ಲಿ ಆ ಪಕ್ಷದ ನಾಯಕರು ಮಗ್ನರಾಗಿದ್ದಾರೆ.
ಉಳಿದಂತೆ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಸಂಖ್ಯಾಬಲದ ಆಧಾರದ ಮೇಲೆ ನಾಲ್ವರನ್ನು ಕಣಕ್ಕಿಳಿಸಿದ್ದು, ಅವರು ಸುಲಭವಾಗಿ ಜಯಗಳಿಸಲಿದ್ದಾರೆ.
ಆದರೆ, ತಲಾ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಬಿಜೆಪಿ ಮತ್ತು ಜೆಡಿಎಸ್, ತಮ್ಮಲ್ಲಿರುವ ಹೆಚ್ಚುವರಿ ಮತಗಳು, ಪಕ್ಷೇತರರು, ಸಣ್ಣಪುಟ್ಟ ರಾಜಕೀಯ ಪಕ್ಷಗಳ ಶಾಸಕರು, ಕಾಂಗ್ರೆಸ್‌ನಲ್ಲಿರುವ ಅತೃಪ್ತ ಶಾಸಕರನ್ನು ನೆಚ್ಚಿಕೊಂಡು ತಲಾ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಬಿಜೆಪಿಯಿಂದ ವಿ. ಸೋಮಣ್ಣ, ಲೇಹರ್ ಸಿಂಗ್ ಪರಿಷತ್‌ಗೆ ಸ್ಪರ್ಧಿಸಿದ್ದು, ಅವರು ಕಣದಲ್ಲಿ ಮುಂದುವರೆಯುವುದು ಖಚಿತವಾಗಿದೆ. ಜೆಡಿಎಸ್ ಅಭ್ಯರ್ಥಿಗಳಾದ ಕೆ.ವಿ. ನಾರಾಯಣಸ್ವಾಮಿ ಹಾಗೂ ವೆಂಕಟಪತಿ ಅವರೂ ಕಣದಲ್ಲಿದ್ದು, ಕಣದಿಂದ ದೂರಸರಿಯುವ ಸಾಧ್ಯತೆಗಳು ಕಂಡು ಬಂದಿಲ್ಲ. ಇದರಿಂದ ಚುನಾವಣೆ ಅನಿವಾರ್ಯವಾಗಿದೆ.

Comments are closed.