ಕರ್ನಾಟಕ

ಉತ್ತರ ವಿಭಾಗದ ಕಾರ್ಯಾಚರಣೆಯಿಂದ 13 ಮಂದಿ ಅಂತರ್‌ರಾಜ್ಯ ಕಳ್ಳರ ಸೆರೆ

Pinterest LinkedIn Tumblr

theifಬೆಂಗಳೂರು, ಮೇ 31- ಉತ್ತರ ವಿಭಾಗದ ಪೊಲೀಸರು ಪೀಣ್ಯ, ರಾಜಾಜಿನಗರ, ಆರ್.ಟಿ.ನಗರ ವ್ಯಾಪ್ತಿಗಳಲ್ಲಿ ನಡೆದಿದ್ದ 30 ಕಳವು ಪ್ರಕರಣಗಳನ್ನು ಭೇದಿಸಿ 13 ಮಂದಿ ಅಂತರ್‌ರಾಜ್ಯ ಕಳ್ಳರನ್ನು ಬಂಧಿಸಿ 80ಲಕ್ಷ ಮೌಲ್ಯದ 2ಕೆಜಿ ಚಿನ್ನಾಭರಣ, 4ಕೆಜಿ ಬೆಳ್ಳಿ ಆಭರಣ, ಒಂದು ಕಾರು, ನಾಲ್ಕು ದ್ವಿಚಿಕ್ರವಾಹನ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೀಣ್ಯ ಪೊಲೀಸರು 21 ಪ್ರಕರಣಗಳನ್ನು ಪತ್ತೆಹಚ್ಚಿ 8 ಮಂದಿ ಆರೋಪಿಗಳಾದ ಮಹಮ್ಮದ್ ಖಲೀಲ್‌ವುಲ್ಲಾ, ರಫೀಕ್, ಕಾರ್ತಿಕ್‌ಗೌಡ, ಧರ್ಮೇಶ್, ಅಜೀಂನಿಕಾರಿ, ಅಬ್ದುಲ್‌ರಸೀದ್ ಮತ್ತು ಕಳವು ಮಾಲು ಸ್ವೀಕರಿಸುತ್ತಿದ್ದ ವೆಂಕಟೇಶ ಮತ್ತು ಮಂಜುನಾಥನನ್ನು ಬಂಧಿಸಿ 42.40 ಲಕ್ಷ ರೂ. ಮೌಲ್ಯದ 905 ಗ್ರಾಂ ಚಿನ್ನಾಭರಣ, 4ಕೆಜಿ ಬೆಳ್ಳಿ ಒಡವೆ, ಲ್ಯಾಪ್‌ಟಾಪ್, ಎರಡು ದ್ವಿಚಕ್ರವಾಹನ, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಮಹಮ್ಮದ್ ಖಲೀಲ್‌ವುಲ್ಲಾ ಅಲಿಯಾಸ್ ಬಾಂಬೆ ಸಲೀಂ ಎಂಬಾತ ಬೆಂಗಳೂರು ನಗರ, ಮುಂಬೈ, ಹೈದರಾಬಾದ್ ಹಾಗೂ ಇತರೆಡೆಗಳಲ್ಲಿ ಕೊಲೆ, ಸುಲಿಗೆ, ಕನ್ನಕಳವು ಹಾಗೂ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದನು. ಜೈಲಿನಿಂದ ಹೊರ ಬಂದ ನಂತರ ತನ್ನ ಹಳೇ ಚಾಳಿ ಮುಂದುವರೆಸಿದ್ದು, ಐಷಾರಾಮಿ ಜೀವನ ನಡೆಸುವ ಸಲುವಾಗಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಬ್ಬಿಣದ ರಾಡುಗಳಿಂದ ಬೀಗ ಮೀಟಿ ಬಾಗಿಲು ಮುರಿದು ಕಳ್ಳತನ ಮಾಡುವುದನ್ನು ರೂಢಿ ಮಾಡಿಕೊಂಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ರಾಜಾಜಿನಗರ ಪೊಲೀಸರು ಎರಡು ಪ್ರಕರಣಗಳನ್ನು ಪತ್ತೆಹಚ್ಚಿ ಮೂಲತಃ ಹಾಸನದ ರಾಮು ಎಂಬಾತನನ್ನು ಬಂಧಿಸಿ 980 ಗ್ರಾಂ ಚಿನ್ನಾಭರಣ, ಒಂದು ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರ್.ಟಿ.ನಗರ ಪೊಲೀಸರು 7 ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳಾದ ಮಂಜುನಾಥನ್, ಗೋಪಿವಿಜಯ್, ದೀಪಕ್‌ಕುಮಾರ್, ರವಿ ಎಂಬುವರನ್ನು ಬಂಧಿಸಿ 225 ಗ್ರಾಂ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 5.62ರೂ.

ಈ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‌ರೆಡ್ಡಿ, ಉಪಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಎಸಿಪಿ ಅರುಣ್ ಆರ್.ನಾಯಕ್ ಹಾಗೂ ಸಿಬ್ಬಂದಿ ಅವರನ್ನೊಳಗೊಂಡ ತಂಡ ಪಾಲ್ಗೊಂಡು ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Comments are closed.