ಕರ್ನಾಟಕ

ಸರ್ಕಾರಕ್ಕೆ ಜೋಡಿಗುದ್ದು : ಲೋಕಾಯುಕ್ತಕ್ಕೆ ನಾಯಕ್ ನೇಮಕ ತಿರಸ್ಕೃತ ಉಪಲೋಕಾಯುಕ್ತ ಅಡಿ ಮುಂದಡಿ

Pinterest LinkedIn Tumblr

sr-nayak-and-adi

ಬೆಂಗಳೂರು, ಮೇ ೨೭ – ರಾಜ್ಯದ ನೂತನ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ನೇಮಕ್ ಅವರನ್ನು ನೇಮಕ ಮಾಡುವಂತೆ ಸರ್ಕಾರ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಎರಡನೇ ಬಾರಿಯೂ ತಿರಸ್ಕರಿಸಿದ್ದಾರೆ. ನಿನ್ನೆತಾನೆ ನ್ಯಾಯಮೂರ್ತಿ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಪದಚ್ಯುತಿ ಮಾಡಿದ ಸರ್ಕಾರದ ಕ್ರಮ ಸರಿಯಲ್ಲ ಎಂದು ನ್ಯಾಯಮೂರ್ತಿ ಬೂದಿಹಾಳ್ ಸಮಿತಿ ನೀಡಿದ ವರದಿಯಿಂದ ತೀವ್ರ ಮುಜುಗೊರಕ್ಕೆ ಒಳಗಾಗಿರುವ ಸರ್ಕಾರಕ್ಕೆ ರಾಜ್ಯಪಾಲರು ಎರಡನೇ ಬಾರಿಯೂ ಎಸ್.ಆರ್. ನಾಯಕ್ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಮಾನ್ಯ ಮಾಡದೆ ತಿರಸ್ಕರಿಸಿರುವುದು ಸರ್ಕಾರಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

ರಾಜ್ಯಪಾಲರ ತೀರ್ಮಾನ ಸರ್ಕಾರಕ್ಕೆ ಆಗಿರುವ ದೊಡ್ಡ ಹಿನ್ನಡೆ. ನ್ಯಾಯಮೂರ್ತಿ ಉಪಲೋಕಾಯುಕ್ತ ಸುಭಾಷ್ ಅಡಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ರೀತಿಯಲ್ಲಿ ಅಪಮಾನಕ್ಕೆ ಒಳಗಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯಪಾಲರು ಎಸ್.ಆರ್. ನಾಯಕ್ ಅವರ ಹೆಸರನ್ನು ತಿರಸ್ಕರಿಸಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಸಾಂವಿಧಾನಿಕ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರಕ್ಕೆ ಒಂದರ ಮೇಲೆ ಒಂದು ಪೆಟ್ಟು ಬೀಳುತ್ತಿರುವುದು ಆಡಳಿತ ಚುಕ್ಕಾಣಿ ಹಿಡಿದವರಿಗೆ ಆದ ಹಿನ್ನಡೆ ಅವಮಾನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇಲ್ಲಿ ನೈತಿಕತೆಯ ವಿಚಾರಗಳು ವ್ಯಕ್ತವಾಗಿವೆ.

ರಾಜ್ಯದ ನೂತನ ಲೋಕಾಯುಕ್ತರ ಆಯ್ಕೆಗೆ ಸಂಬಂಧಿಸಿದಂತೆ ಉನ್ನತಾಧಿಕಾರಿ ಸಮಿತಿಯ ಸಭೆಯಲ್ಲಿ ಒಮ್ಮತ ಮೂಡದಿದ್ದರೂ ಸಿ.ಎಂ ಸಿದ್ದರಾಮಯ್ಯ, ಎಸ್.ಆರ್. ನಾಯಕ್‌ರವರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಅದನ್ನು ರಾಜ್ಯಪಾಲ ವಜುಬಾಯ್ ವಾಲಾ ತಿರಸ್ಕರಿಸಿದ್ದರು. ನ್ಯಾಯಮೂರ್ತಿ ಎಸ್.ಆರ್. ನಾಯಕ್‌ರವರ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಮೊದಲ ಸಲವೇ ಶಿಫಾರಸ್ಸನ್ನು ಒಪ್ಪಿರಲಿಲ್ಲ.

ಆದರೆ ಹಠಕ್ಕೆ ಬಿದ್ದ ಸಿ.ಎಂ ಸಿದ್ದರಾಮಯ್ಯ ಎರಡನೆ ಬಾರಿ ಮತ್ತೆ ಎಸ್.ಆರ್. ನಾಯಕ್‌ರವರ ಹೆಸರನ್ನು ಕಳೆದ ವಾರ ಲೋಕಾಯುಕ್ತರ ಹುದ್ದೆಗೆ ಶಿಫಾರಸು ಮಾಡಿದ್ದರು. ಎರಡನೆ ಬಾರಿಯೂ ರಾಜ್ಯಪಾಲರು ಈ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ.

ರಾಜ್ಯದಲ್ಲಿ ರಾಜಭವನ – ಸರ್ಕಾರ ಸಂಘರ್ಷ

ರಾಜ್ಯಪಾಲರ ಸಂಘರ್ಷ ಹೆಚ್ಚಾಗುತ್ತಿದ್ದು, ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷರಾಗಿ ವಿ.ಆರ್. ಸುದರ್ಶನ್‌ರವರ ಹೆಸರನ್ನು ತಿರಸ್ಕರಿಸಿದ್ದ ರಾಜ್ಯಪಾಲರು, ಸರ್ಕಾರಿ ಗುತ್ತಿಗೆಯಲ್ಲಿ ಎಸ್.ಸಿ., ಎಸ್.ಟಿ. ಜನಾಂಗದವರಿಗೆ ಮೀಸಲಾತಿ ನೀಡುವ ಸರ್ಕಾರದ ತೀರ್ಮಾನವನ್ನು ಒಪ್ಪಿರಲಿಲ್ಲ. ಹಾಗೆಯೇ ಗ್ರಾಮೀಣ ವಿ.ವಿ. ಸ್ಥಾಪನೆಯ ಸುಗ್ರೀವಾಜ್ಞೆಗೂ ಸಹಿ ಹಾಕಲು ನಿರಾಕರಿಸಿದ್ದರು.

ಒಟ್ಟಾರೆ ರಾಜಭವನ ಸರ್ಕಾರದ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಒಂದರ್ಥದಲ್ಲಿ ಗದಾ ಪ್ರಹಾರವನ್ನು ನಡೆಸುತ್ತಲೇ ಇದೆ.

Comments are closed.