ಕರ್ನಾಟಕ

ಐಎಎಸ್‌ ಅಧಿಕಾರಿಗಳ ಆಸ್ತಿ ರಕ್ಷಣೆಗೆ ಯತ್ನ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆರೋಪ

Pinterest LinkedIn Tumblr

Kumaraswamy-HDಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಬಡಾವಣೆಗಳಲ್ಲಿ ಮಾಜಿ ಸಚಿವರು, ಐಎಎಸ್‌ ಅಧಿಕಾರಿಗಳಿಗೆ ಸೇರಿದ ಆಸ್ತಿಗಳಿವೆ. ಈ ಕಾರಣಕ್ಕಾಗಿ ಅವುಗಳನ್ನು ರಕ್ಷಿಸಲು ಮುಖ್ಯಮಂತ್ರಿ ಬಯಸಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಡಿಎ ಕೆರೆ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸುವುದಿಲ್ಲ, ಖಾಸಗಿ ಅತಿಕ್ರಮಣವನ್ನು ಮಾತ್ರ ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಸರ್ಕಾರದ ಇಬ್ಬಗೆ ನೀತಿಯಲ್ಲವೇ’ ಎಂದು ಪ್ರಶ್ನಿಸಿದರು.

‘ಸಾಲ ಪಡೆದು ಬಡಾವಣೆಗಳನ್ನು ನಿರ್ಮಿಸಿದ ಖಾಸಗಿ ಬಿಲ್ಡರ್‌ಗಳನ್ನು ಗುರಿಯಾಗಿಟ್ಟುಕೊಂಡು ಒತ್ತುವರಿ ತೆರವುಗೊಳಿಸಲು ಸರ್ಕಾರ ಹೊರಟಿದೆ. ಖಾಸಗಿ ಬಡಾವಣೆಗೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಯಾವ ಕ್ರಮವೂ ಇಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.

‘ದಲಿತ ಮಹಿಳೆ ಸುನೀತಾ ಕಟ್ಟಿರುವ ಮನೆ ಇರುವ ಜಾಗ ರಾಜಕಾಲುವೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಎಂಟು ವರ್ಷಗಳಿಂದ ತೆರಿಗೆ ಕಟ್ಟಿಸಿಕೊಂಡಾಗ ಈಗ ಪರಿಜ್ಞಾನ ಇರಲಿಲ್ಲವೇ?’ ಎಂದು ಪ್ರಶ್ನಿಸಿದರು.

ಕ್ರಮಕ್ಕೆ ಒತ್ತಾಯ: ‘ಸುನೀತಾ ಮೇಲೆ ಪೊಲೀಸ್‌ ದೌರ್ಜನ್ಯ ನಡೆಯಲು ಕಾರಣರಾದ ಮುಖ್ಯಮಂತ್ರಿ ಕಚೇರಿಯ ನೌಕರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇನ್ನೂ ಎರಡು ದಿನ ಕಾಯುತ್ತೇನೆ. ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳದಿದ್ದರೆ ಅವರ ಗೃಹ ಕಚೇರಿ ಎದುರು ಧರಣಿ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿಗೆ ನೋಟಿಸ್‌ ನೀಡಬೇಕಾದ ರಾಜ್ಯ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್‌ ನೀಡಿದೆ’ ಎಂದರು.

‘ಬರ ಕಾಮಗಾರಿ ಸರಿಯಾಗಿ ಕೈಗೊಳ್ಳದ ಕಾರಣ ಇತ್ತೀಚೆಗೆ ಕೆಲಸ ಅರಸಿ ಬೆಂಗಳೂರಿಗೆ ಬಂದ ಕಲಬುರ್ಗಿಯ ಕುಟುಂಬವೊಂದರ ನಾಲ್ವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಆ ಘಟನೆಯಲ್ಲಿ ಬದುಕುಳಿದ ಹೆಣ್ಣು ಮಗಳೊಬ್ಬಳು ಇನ್ನೂ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ಸರ್ಕಾರ ಯಾವುದೇ ನೆರವು ನೀಡಿಲ್ಲ. ಆ ಬಗ್ಗೆ ಮಾತನಾಡಿದರೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಾರೆ ಎಂದು ಹೇಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಅವರನ್ನು ಬೀದಿಗೆ ಬರುವಂತೆ ಮಾಡಬಾರದು’ ಎಂದರು.
‘ರಾಜ್ಯಸಭೆ ಚುನಾವಣೆಗೆ ರಾಜ್ಯದವರನ್ನೇ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಪಕ್ಷ ಬದ್ಧವಾಗಿದೆ’ ಎಂದು ಹೇಳಿದರು.

ರಾಜಕೀಯ ಅಸ್ತ್ರವಾಗಿ ದಲಿತ ಮಹಿಳೆ ಬಳಕೆ: ಪರಮೇಶ್ವರ್(ಚಿಕ್ಕಬಳ್ಳಾಪುರ ವರದಿ): ‘ಪೊಲೀಸರು ದಲಿತ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸುವ ಮೂಲಕ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ದಲಿತ ಯುವತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಸರಿಯಲ್ಲ’ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ‘ಜನತಾ ದರ್ಶನಕ್ಕೆ ಮುಖ್ಯ ಮಂತ್ರಿಗಳ ಗೃಹ ಕಚೇರಿಗೆ ಬಂದ ದಲಿತ ಮಹಿಳೆಗೆ ಸಮಯ ಮೀರಿದ್ದರಿಂದ ಮರುದಿನ ಬರುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಆ ಮಹಿಳೆ ತನ್ನ ವಿಳಾಸ, ಸ್ವವಿವರ ತಿಳಿಸದೇ ಅಲ್ಲೇ ಉಳಿದು ಕೊಂಡಿದಳು. ಭದ್ರತೆ ದೃಷ್ಟಿಯಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಇದೇ ವಿಷಯವನ್ನಿಟ್ಟು ಕೊಂಡು ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

Comments are closed.