ಕರ್ನಾಟಕ

`ಸರ್ಕಾರದ ಸಾಧನೆ – ಶೂನ್ಯ ಸಂಪಾದನೆ’ ಬಿಎಸ್‌ವೈ ಕುಹಕ

Pinterest LinkedIn Tumblr

bsyಬೆಂಗಳೂರು, ಮೇ ೧೩- ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ 3 ವರ್ಷದ ಸಾಧನೆ ಶೂನ್ಯ ಎಂದು ಜರಿದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿ.ಜೆ.ಪಿ ಅಧ್ಯಕ್ಷ ಯಡಿಯೂರಪ್ಪರವರು ಅಭಿವೃದ್ಧಿ ಶೂನ್ಯ ಸರ್ಕಾರದ ಮಂತ್ರಿ ಮಂಡಲದ ಕ್ಯಾಪ್ಟನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಟೀಕಿಸಿದ್ದಾರೆ.
ಈ ಸರ್ಕಾರ ರೈತ ವಿರೋಧಿ, ದಲಿತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ ಎಂದು ಅವರು ಹರಿಹಾಯ್ದರು.
ಈ ಸರ್ಕಾರದ 3 ವರ್ಷದ ಸಾಧನೆ ಶೂನ್ಯ. ಸರ್ಕಾರದ ಆಡಳಿತ ಜನತೆಗೆ ನೋವು ನೀಡಿದೆ. ಇದಷ್ಟೆ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಅವರು ಹೇಳಿದರು.
ಸಾಲ ಬಾಧೆಯಿಂದ ಸುಮಾರು 1500 ರೈತರು ಆತ್ಮಹತ್ಯೆಗೆ ಶರಣಾದರು. ಇದು ಈ ಸರ್ಕಾರದ ಸಾಧನೆ. ರೈತ ಕುಟುಂಬಗಳಿಗೆ ಪರಿಹಾರ ನೀಡದಿರುವುದೇ ಈ ಸರ್ಕಾರದ ಸಾಧನೆ. ರೈತರಿಗೆ ಅನ್ಯಾಯ ಮಾಡಿರುವುದೂ ಈ ಸರ್ಕಾರದ ಸಾಧನೆ ಎಂದು ಅವರು ಕಟುವಾಗಿ ಹೇಳಿದರು.
ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಂತ್ರಿ ಮಂಡಲದಲ್ಲಿ ಪರಸ್ಪರ ಸಮನ್ವಯತೆ ಇಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಪಕ್ಷದ ಕಚೇರಿಯಲ್ಲಿ ನ‌ಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ 137 ತಾಲ್ಲೂಕುಗಳಲ್ಲಿ ಭೀಕರ ಬರಗಾಲದ ಜತೆಯಲ್ಲಿ 4 ಸಾವಿರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಈ ಸರ್ಕಾರ ಸಮಸ್ಯೆ ನಿವಾರಣೆಗೆ ಮುಂದಾಗದೆ ಕಾಲ ಹರಣ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡಿಲ್ಲ. ಸುಮಾರು 490 ಕೋಟಿ ರೂ. ಕೇಂದ್ರದ ಹಣ ಖಜಾನೆಯಲ್ಲೆ ಉಳಿದಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿದ್ದಾರೆ. ಅನೇಕ ಭಾಗ್ಯಗಳನ್ನು ಘೋಷಿಸಿದ ಮುಖ್ಯಮಂತ್ರಿಗಳ ಆರಂಭ ಶೂರತ್ವ ಈಗ ಎಲ್ಲಿ ಹೋಗಿದೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 11 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದೇ ಸಿಎಂ ಸಿದ್ದರಾಮಯ್ಯರವರ ಸಾಧನೆ. ಲೋಕಾಯುಕ್ತವನ್ನು ಮುಗಿಸಲು ಎಸಿಬಿ ರಚನೆ ಮಾಡಿ ಲೋಕಾಯುಕ್ತಕ್ಕೆ ಚರಮಗೀತೆ ಹಾಡಿರುವುದು ಇವರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಶೂನ್ಯ ಸರ್ಕಾರದ ಮಂತ್ರಿ ಮಂಡಲದ ಕ್ಯಾಪ್ಟನ್ ಆಗಿರುವ ಸಿದ್ದರಾಮಯ್ಯನವರು ಸ್ವಜನಪಕ್ಷಪಾತ ಎಸಗಿದ್ದಾರೆ. ಪುತ್ರನ ಪಾಲುದಾರಿಗೆ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ನಡೆಸಲು ಅವಕಾಶ ನೀಡಿದ್ದಾರೆ ಎಂದು ಅವರು ದೂರಿದರು.
ಈ ಸರ್ಕಾರ ನುಡಿದಂತೆ ನಡೆದಿಲ್ಲ. ಕೃಷ್ಣೆಯ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದು ಪ್ರತಿ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿ, ಕಳೆದ 3 ವರ್ಷದಲ್ಲಿ ಎಲ್ಲಾ ನೀರಾವರಿ ಯೋಜನೆಗೆ ಖರ್ಚು ಮಾಡಿದ್ದು ಕೇವಲ 22 ಸಾವಿರ ಕೋಟಿ ಮಾತ್ರ ಎಂದು ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸಚಿವ ಹೆಚ್.ಕೆ. ಪಾಟೀಲ್‌ರವರ ಗಮನಕ್ಕೆ ತಾರದೆ ಅಧಿಕಾರಿಗಳು ಟೆಂಡರ್‌ಗಳನ್ನು ನೀಡಿದ್ದಾರೆ. ಇದು ಇಲಾಖೆಯನ್ನು ನಡೆಸುವ ರೀತಿಯೇ ಎಂದು ಅವರು ಪ್ರಶ್ನಿಸಿದರು.
ಮಾರ್ಚ್ 2016ರ ವೇಳೆಗೆ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುತ್ತೇವೆ ಇಲ್ಲವೇ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. 3 ವರ್ಷಗಳಲ್ಲಿ ಕೇವಲ 1500 ಘಟಕಗಳು ಮಾತ್ರ. ಇದು ಸರ್ಕಾರದ ಆಡಳಿತಕ್ಕೆ ಕೈಗನ್ನಡಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೆಂದು ಬಿಂಬಿಸಿಕೊಂಡು ಈ ಸರ್ಕಾರ ಪ್ರಚಾರ ಪಡೆದುಕೊಳ್ಳುತ್ತಿದೆ. ಎಲ್.ಇ.ಡಿ. ಬಲ್ಬ್ ನೀಡುವ ಯೋಜನೆ, ಅನ್ನಭಾಗ್ಯಕ್ಕೆ ಅಕ್ಕಿ ನೀಡುವುದು ಎಲ್ಲವೂ ಕೇಂದ್ರ ಸರ್ಕಾರ. ಹಾಗೆಯೇ ಪಂಚಾಯ್ತಿಗಳ ಅಭಿವೃದ್ಧಿ ಕೆಲಸಕ್ಕಾಗಿ ಕೇಂದ್ರ ಸರ್ಕಾರವೇ ಹಣ ಒದಗಿಸುತ್ತಿದೆ. ಇದನ್ನೆಲ್ಲಾ ಕಾಂಗ್ರೆಸ್ ಸರ್ಕಾರ ತನ್ನ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದರು.
ಈ ಸರ್ಕಾರ ಕಳೆದ 3 ವರ್ಷಗಳಲ್ಲಿ 70 ಸಾವಿರ ಕೋಟಿ ರೂ. ಸಾಲ ಮಾಡಿದೆ. ಇದೆ ಇವರ ಸಾಧನೆ. ವಿವಿಧ ಇಲಾಖೆಗಳಿಗೆ ನೀಡಿದ್ದ ಅನುದಾನ ಬಳಕೆಯಾಗಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ ಎಂದು ಅವರು ತಿಳಿಸಿದರು.

Write A Comment