ಕರ್ನಾಟಕ

ಕಾನ್‌ಸ್ಟೆಬಲ್‌ ಮತ್ತು ಗ್ರಾ.ಪಂ.ಉಪಾಧ್ಯಕ್ಷೆ ಪತಿಯಿಂದ ಕಿರುಕುಳ ಆರೋಪ; ಸೆಲ್ಫಿ ವಿಡಿಯೊ ಚಿತ್ರೀಕರಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ

Pinterest LinkedIn Tumblr

rudrayya

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ಪೊಲೀಸ್ ಕಾನ್‌ಸ್ಟೆಬಲ್‌ ಮತ್ತು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪತಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರ ಬರೆದಿಟ್ಟು, ತಾಲ್ಲೂಕಿನ ಜಿ. ಕೋಡಿಹಳ್ಳಿ ಗ್ರಾಮದ ಎಂ.ಎಂ. ರುದ್ರಯ್ಯ (25) ಎಂಬುವವರು ಸೋಮವಾರ ಸಂಜೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೆ ಆತ ಕ್ರಿಮಿನಾಶಕ ಸೇವಿಸುವುದನ್ನು ಸೆಲ್ಫಿ ವಿಡಿಯೊ ಚಿತ್ರೀಕರಿಸಿದ್ದು, ಆ ವಿಡಿಯೊ ತುಣುಕು ಸ್ಥಳೀಯರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

ಕಿರುಕುಳ ನೀಡಿದ ಆರೋಪದ ಮೇಲೆ ತಂಬ್ರಹಳ್ಳಿ ಠಾಣೆ ಕಾನ್‌ಸ್ಟೆಬಲ್‌ ಎಚ್‌. ಬಸವರಾಜ್‌ ಮತ್ತು ಗದ್ದಿಕೇರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕಾವ್ಯಾ ಸಿಗಾಣಿ ಪತಿ ಸಿಗಾಣಿ ಬಸವರಾಜ್‌ ವಿರುದ್ಧ ಮೃತನ ಸೋದರ ಎಂ.ಎಂ.ಮಂಜುನಾಥಯ್ಯ ತಂಬ್ರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಆರೋಪಿಗಳು ರುದ್ರಯ್ಯನಿಗೆ ಕರೆ ಮಾಡಿ, ನೀನು ಮಹಿಳೆಯೊಬ್ಬರಿಗೆ ಆಗಾಗ್ಗೆ ಫೋನ್‌ ಮಾಡುತ್ತಿದ್ದೀಯಾ. ನಿನ್ನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದರಿಂದ ಬಚಾವ್‌ ಮಾಡಬೇಕೆಂದರೆ ₹ 60 ಸಾವಿರ ಕೊಡಬೇಕು ಎಂದು ಹೇಳಿ ಹಣ ಪಡೆದುಕೊಂಡಿದ್ದರು. ನಂತರ ಮತ್ತೆ ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಇದೇ 3ರಂದು ಊರಿಗೆ ಬಂದು ಠಾಣೆಗೆ ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದು, ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಆರ್‌.ಎಸ್‌. ಪಾಟೀಲ ತಿಳಿಸಿದ್ದಾರೆ.

ವಿಡಿಯೊ ತುಣುಕು– ಪತ್ರದಲ್ಲಿ ಏನಿದೆ?
ಆರೋಪಿಗಳ ಮೊಬೈಲ್‌ ಕಾಲ್‌ ಡೀಟೇಲ್‌ ತೆಗೆಸಿನೋಡಿದರೆ ಅವರು ತನಗೆ ಕೊಟ್ಟ ಹಿಂಸೆಯ ಬಗ್ಗೆ ತಿಳಿಯುತ್ತದೆ. ತಾನು ಕೆಲ ವಿವರವನ್ನು ಬರೆದಿಟ್ಟಿದ್ದು, ಅದನ್ನು ಕೂಡ ನೋಡುವಂತೆ ಹೇಳಿರುವ ದೃಶ್ಯ ವಿಡಿಯೊ ತುಣುಕಿನಲ್ಲಿದೆ.

ಆತ್ಮಹತ್ಯೆಗೆ ಮುನ್ನ, ಆತ ತಂಬ್ರಹಳ್ಳಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ಅವರಿಗೆ ರುದ್ರಯ್ಯ ಬರೆದಿರುವ ಪತ್ರದಲ್ಲಿ, ‘ಯಾವ ಮಹಿಳೆಗೆ ನಾನು ಕರೆ ಮಾಡುತ್ತಿರುವುದಾಗಿ ಹೇಳಿ ಆರೋಪಿಗಳು ಬೆದರಿಸುತ್ತಿದ್ದಾರೋ ಆ ಮಹಿಳೆಯೊಂದಿಗೆ ನಾಗರಾಜ ಮತ್ತು ದೊಡ್ಡ ಬಸಪ್ಪ ಎಂಬ ಇಬ್ಬರು ಸಲುಗೆಯಿಂದ ಇದ್ದಾರೆ. ಅದರೆ ಅವರ ತಪ್ಪನ್ನು ನನ್ನ ಮೇಲೆ ಹಾಕಿ, ಕಳೆದ ತಿಂಗಳ 27ರಿಂದ ಕರೆ ಮಾಡಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಇದೇ 3ರಂದು ಮತ್ತೆ ಫೋನ್‌ ಮಾಡುವುದಾಗಿ ಹೇಳಿದ್ದಾರೆ. ಅವರ ಕಿರುಕುಳ ತಾಳಲಾರದೇ ಟ್ರ್ಯಾಕ್ಟರ್‌ ಸಾಲದ ಕಂತು ತುಂಬಲು ಬ್ಯಾಂಕಿನಿಂದ ಸಾಲ ಮಾಡಿದ್ದ ₹ 60 ಸಾವಿರವನ್ನು ಆರೋಪಿಗಳಿಗೆ ನೀಡಿದ್ದೇನೆ’ ಎಂದಿದೆ. ಜತೆಗೆ ಆರೋಪಿಗಳ ಮೊಬೈಲ್‌ ಸಂಖ್ಯೆಯನ್ನೂ ಆ ಪತ್ರದಲ್ಲಿ ನಮೂದಿಸಲಾಗಿದೆ.

Write A Comment