ಕರ್ನಾಟಕ

ವೆಂಕಟ್‌ ಬಿಟ್ರೂ ಡಿಕ್ಟೇಟರ್‌ ನಿಲ್ಲಲ್ಲ: ಎಸ್‌.ನಾರಾಯಣ್‌

Pinterest LinkedIn Tumblr

1_1“ಯಾರು ಇರಲಿ, ಬಿಡಲಿ “ಡಿಕ್ಟೇಟರ್‌’ ಚಿತ್ರವನ್ನು ನಾನು ಖಂಡಿತವಾಗಿಯೂ ಮಾಡೇ ಮಾಡ್ತೀನಿ…’
– ಹೀಗೆ ಸ್ಪಷ್ಟಪಡಿಸಿದರು ನಿರ್ದೇಶಕ ಎಸ್‌.ನಾರಾಯಣ್‌. ಮೊನ್ನೆಯಷ್ಟೇ ನಟ ಹುಚ್ಚ ವೆಂಟಕ್‌ ನಾನು “ಡಿಕ್ಟೇಟರ್‌’ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆ ಕುರಿತು “ಉದಯವಾಣಿ’ ಜತೆ ಮಾತನಾಡಿದ ಎಸ್‌.ನಾರಾಯಣ್‌, “ನಮ್ಮ ಚಿತ್ರ ನಿಲ್ಲುವುದಿಲ್ಲ. ಸಿನಿಮಾ ಶುರುವಾಗುತ್ತೆ. ಹೋಗುವವರು ಹೋಗಲಿ. ಯಾವುದೇ ತೊಂದರೆ ಇಲ್ಲ. ತಾಳ್ಮೆ ಕಳೆದುಕೊಂಡವರಿಗೆ ಏನೂ ಮಾಡುವುದಕ್ಕಾಗುವುದಿಲ್ಲ. “ಡಿಕ್ಟೇಟರ್‌’ ನನ್ನ ಪ್ರಕಾರ ಒಂದೊಳ್ಳೆಯ ಸಿನಿಮಾ ಆಗುತ್ತೆ. ಅಂತಹ ಸಿನಿಮಾದ ಭಾಗವಾಗಿರಲು ಅವರಿಗೆ ಆಗುತ್ತಿಲ್ಲ. ಸಿನಿಮಾದಲ್ಲಿ ಅವರು ಇಲ್ಲದಿದ್ದರೆ ಏನೂ ಆಗುವುದಿಲ್ಲ’ ಎಂದು ಹೇಳುತ್ತಾ ಹೋದರು ಎಸ್‌.ನಾರಾಯಣ್‌.

“ಡಿಕ್ಟೇಟರ್‌’ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ ಎಂದು ಹೇಳಿರುವ ವೆಂಕಟ್‌ಗೆ ಚಿತ್ರವನ್ನು ಬೇಗ ಶುರುಮಾಡಬೇಕಂತೆ. ಹಾಗೆಯೇ ರಿಲೀಸ್‌ ಕೂಡ ಮಾಡಬೇಕಂತೆ. ಹೀಗೆ ಅರ್ಜೆಂಟ್‌ ಮಾಡಿದರೆ, ಸಿನಿಮಾ ಆಗುತ್ತಾ, ಆದರೂ, ಅದು ಚೆನ್ನಾಗಿ ಮೂಡಿಬರುತ್ತಾ. ನನಗೆ ಸ್ಕ್ರಿಪ್ಟ್ ಮುಗಿಯಬೇಕು. ಆ ಬಳಿಕ ಅದು ತೃಪ್ತಿ ಕೊಡಬೇಕು. ಯಾರೋ ಒತ್ತಡ ಹೇರುತ್ತಾರೆ ಅಂತ ಅರ್ಜೆಂಟ್‌ ಆಗಿ ಏನೋ ಗೀಚಿಕೊಂಡು ಹೋಗಿ ಸಿನಿಮಾ ಮಾಡುವ ನಿರ್ದೇಶಕ ನಾನಲ್ಲ. ಯಾವತ್ತೂ ಮಾಡಿಲ್ಲ. ಮುಂದೆಯೂ ಮಾಡೋದಿಲ್ಲ. ಇದುವರೆಗೆ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ನಾರಾಯಣ್‌ ಹೇಗೆ ಅಂತ ಇಂಡಸ್ಟ್ರಿಯಲ್ಲಿರುವ ಎಲ್ಲರಿಗೂ ಗೊತ್ತಿದೆ. ನಾನು ಸಮಯ ಹಾಳು ಮಾಡುವವನಲ್ಲ. ಸಮಯಕ್ಕೆ ಬೆಲೆ ಕೊಡ್ತೀನಿ. ಬೇರೆಯವರ ಹಾಗೆ, ನಾಲ್ಕು ಸಿನಿಮಾಗಳನ್ನು ಒಟ್ಟಿಗೆ ಮಾಡುವಂತವನಲ್ಲ. ನನ್ನ ಸಿನಿಮಾದ ಸ್ಕ್ರಿಪ್ಟ್ ಮುಗಿಯೋವರೆಗೆ ಎಂದಿಗೂ ಶೂಟಿಂಗ್‌ ಡೇಟ್‌ ಹಾಕಲ್ಲ. ಏನು ಮಾಡಲಿ, ಅವರಿಗೆ ತುಂಬಾ ಅವಸರ. ಅವರ ಅವಸರಕ್ಕೆ ನಾನು ಮಾಡೋಕ್ಕಾಗಲ್ಲ’ ಅಂತ ಹೇಳುತ್ತಾರೆ ನಾರಾಯಣ್‌.

“ಈಗಾಗಲೇ “ಡಿಕ್ಟೇಟರ್‌’ ಸ್ಕ್ರಿಪ್ಟ್ ಎಂಟು ರೌಂಡು ಆಗಿದೆ. ನಿಜ ಹೇಳುವುದಾದರೆ, “ಡಿಕ್ಟೇಟರ್‌’ ನನಗೆ ತುಂಬ ಖುಷಿ ಕೊಟ್ಟಂತಹ ಸ್ಕ್ರಿಪ್ಟ್. ಕಮರ್ಷಿಯಲ್‌ ಮತ್ತು ಸೋಷಿಯಲ್‌ ಮೆಸೇಜ್‌ ಇಟ್ಟುಕೊಂಡು ಒಳ್ಳೇ ಕಥೆ ಹೆಣೆದಿದ್ದೇನೆ. ವೆಂಕಟ್‌ ಸಮಾಧಾನವಾಗಿ ನನ್ನೊಂದಿಗೆ, ನಿರ್ಮಾಪಕರ ಜತೆ ಕುಳಿತು ಮಾತಾಡಬಹುದಿತ್ತು. ಮಾಧ್ಯಮ ಮುಂದೆ ಹೋಗುವ ಅಗತ್ಯವೇ ಇರಲಿಲ್ಲ. ನಿರ್ಮಾಪಕರು ಕೂಡ ನನ್ನೊಂದಿಗೆ ಚರ್ಚಿಸಿದ್ದಾರೆ. ನೀವು ಮೊದಲು ಸ್ಕ್ರಿಪ್ಟ್ ಫೈನಲ್‌ ಮಾಡಿಕೊಳ್ಳಿ. ಆಮೇಲೆ ಸಿನಿಮಾ ಮಾಡೋಣ ಅಂತಾನೇ ಹೇಳಿದ್ದಾರೆ. ನಾನು ಮೊದಲಿನಿಂದಲೂ ಪೇಪರ್‌ ಕೆಲಸಕ್ಕೆ ಹೆಚ್ಚು ಒತ್ತು ಕೊಡ್ತೀನಿ. ಅದನ್ನು ಪಕ್ಕಾ ಮಾಡಿಕೊಂಡ ಮೇಲಷ್ಟೇ ಸಿನಿಮಾ ಶೂಟಿಂಗ್‌ ಗೆ ಹೊರುಡತ್ತೇನೆ. ಮಾಡೋದಿಲ್ಲ ಅಂತ ಹೇಳಿದವರನ್ನು ಮತ್ತೆಕರೆದುಕೊಂಡು ಬಂದು ಸಿನಿಮಾ ಮಾಡುವ ಅವಶ್ಯಕತೆ ನನಗಿಲ್ಲ.

ಇದುವರೆಗೆ ಅವರನ್ನು ಬಿಟ್ಟು ಯೋಚನೆ ಮಾಡಿರಲಿಲ್ಲ. ಈಗ ಅವರ ಹೇಳಿಕೆಯಿಂದಾಗಿ, ಯೋಚನೆ ಮಾಡ್ತೀನಿ. “ಡಿಕ್ಟೇಟರ್‌’ ಸಿನಿಮಾ ಯಾರಿಲ್ಲದಿದ್ದರೂ ಆಗುತ್ತೆ. ನಿರ್ಮಾಪಕರಿಗಂತೂ ಸ್ಕ್ರಿಪ್ಟ್ ಖುಷಿ ಕೊಟ್ಟಿದೆ. ಸಿನಿಮಾ ಶುರುವಾಗುತ್ತೆ. ಒಳ್ಳೆಯ ಸಿನಿಮಾ ಆಗಬೇಕಾದರೆ, ಸಮಯ ಬೇಕು. ಒಂದಂತೂ ನಿಜ, ಅವರು ಹೊರ ಹೋದರೆ ಸಿನಿಮಾ ನಿಲ್ಲೋದಿಲ್ಲ. ಅವರಿಲ್ಲವೆಂದರೆ, ಇನ್ನೊಬ್ಬರು ಇದ್ದೇ ಇರ್ತಾರೆ’ ಎಂಬುದು ನಾರಾಯಣ್‌ ಮಾತು.
-ಉದಯವಾಣಿ

Write A Comment