ಕರ್ನಾಟಕ

ಇನ್ನೂ 2 ವರ್ಷ ನಾನೇ ಸಿಎಂ: ಸಿದ್ದರಾಮಯ್ಯ

Pinterest LinkedIn Tumblr

CM-Siddu

ಬೆಂಗಳೂರು: ಮುಂದಿನ 2 ವರ್ಷಗಳಿಗೂ ಕೂಡ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬುದು ಕೇವಲ ಊಹಾಪೋಹ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದರು.

ಸಚಿವ ಸಂಪುಟ ವಿಸ್ತರಣೆ, ಸಮಾನಮನಸ್ಕ ಮುಖಂಡರ ಬಿನ್ನಮತ ಇತ್ಯಾದಿ ವಿಚಾರಗಳಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಕಳೆದುಕೊಳ್ಳಲ್ಲಿದ್ದಾರೆ ಎಂಬ  ಊಹಾಪೋಹಗಳನ್ನು ಸಿಎಂ ಸಿದ್ದರಾಮಯ್ಯ ಅವರು ಅಲ್ಲಗಳೆದಿದ್ದು, ಮುಂದಿನ 2 ವರ್ಷದ ಕಾಲಾವಧಿಗೂ ಕೂಡ ನಾನೇ ಸಿಎಂ ಎಂದು ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರ ಕೇವಲ ಗಾಳಿ  ಸುದ್ದಿಯಾಗಿದ್ದು, ಮುಖ್ಯಮಂತ್ರಿ ಬದಲಾಗುವುದಿಲ್ಲ ನಾನೇ ಮುಂದಿನ 2 ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಅವರು ಹೇಳಿದರು.

ಕರ್ನಾಟಕ ವಕೀಲರ ಪರಿಷತ್ ಬೆಂಗಳೂಕಿನಲ್ಲಿ ಆಯೋಜಿಸಿದ್ದ ಮಾಜಿ ಸಚಿವ ಪ್ರೊ. ಎ. ಲಕ್ಷ್ಮಿಸಾಗರ್‌ರವರ ದತ್ತಿ ಉಪನ್ಯಾಸದಲ್ಲಿ “ಮೂಢನಂಬಿಕೆಗಳು ವೈಜ್ಞಾನಿಕ ಮನೋಭಾವಕ್ಕೆ  ಮಾರಕವೇ” ಎಂಬ ವಿಷಯದ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಾಮರಾಜನಗರ ಜಿಲ್ಲೆಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದ್ದು,  ಮುಖ್ಯಮಂತ್ರಿಯಾದ ಮೇಲೆ ನಾನು 6 ಬಾರಿ ಚಾಮರಾಜನಗರ ಜಿಲ್ಲೆಗೆ ಹೋಗಿದ್ದೇನೆ. ಆದರೂ 3 ವರ್ಷದಿಂದ ಅಧಿಕಾರದಲ್ಲಿ ಇದ್ದೇನಲ್ಲ, ನನ್ನ ಅಧಿಕಾರ ಹೋಗಿಲ್ಲ ಎಂದು ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಊಹಾಪೋಹದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಸಿದ್ದರಾಮಯ್ಯನವರ ಅಧಿಕಾರ ಹೊರಟು ಹೋಗುತ್ತದೆ ಎಂಬ  ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬದಲಾವಣೆ ಕೇವಲ ಗಾಳಿ ಸುದ್ದಿ. ಮುಂದಿನ 2 ವರ್ಷವೂ ನಾನೇ ಮುಖ್ಯಮಂತ್ರಿಯಾಗಿಯೇ ಮುಂದುವರೆಯುತ್ತೇನೆ, ಇದರಲ್ಲಿ ಯಾವುದೇ  ಬದಲಾವಣೆ ಇಲ್ಲ ಎಂದು ಹೇಳಿದರು.

ಅಂತೆಯೇ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಬದ್ಧವಾಗಿ ಎಂದು ಹೇಳಿದ ಸಿದ್ದರಾಮಯ್ಯ ಅವರು, ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಯಾಗಿರುವ ಮೂಢನಂಬಿಕೆ ನಿಷೇಧ  ಕಾನೂನಿಗಿಂತ ಬಲವಾದ ಕಾಯ್ದೆಯನ್ನು ರೂಪಿಸುವಂತೆ ಕಾನೂನು ಇಲಾಖೆಗೆ ಸೂಚಿಸಿದ್ದೇನೆ. ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಆದಷ್ಟು ಬೇಗ ವಿಧಾನಸಭೆಯಲ್ಲಿ ಮಂಡಿಸುವ ಕುರಿತು  ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.

“ಜನ ವಿಚಾರವಂತರಾಗಬೇಕು, ಮೂಢನಂಬಿಕೆಗಳನ್ನು ಕೈಬಿಡಬೇಕು. ಜ್ಯೋತಿಷ್ಯ, ವಾಸ್ತು, ಇವುಗಳನ್ನೆಲ್ಲಾ ನಂಬಬಾರದು. ಕೆಲವರು ಮನೆಗೆ ಬಂದು ತಿಂಡಿ ತಿಂದು ಕಾಫಿ ಕುಡಿದು ವಾಸ್ತು  ಸರಿಯಿಲ್ಲ ಎಂದು ತೆಲೆಗೆ ಹುಳ ಬಿಡುತ್ತಾರೆ. ಮನೆಯ ಹೆಂಗಸರು ಇದನ್ನು ನಂಬುತ್ತಾರೆ. ಇಂತಹ ವಿಚಾರಗಳಿಗೆಲ್ಲಾ ಸೊಪ್ಪು ಹಾಕಬಾರದು. ಜ್ಯೋತಿಷ್ಯ, ರಾಹುಕಾಲ, ಗುಳಿಕಾಲ ಇವುಗಳನ್ನು  ದೂರವಿಡಬೇಕು. ಈ ಬಾರಿಯ ಬಜೆಟ್‌ ಅನ್ನು ನಾನು ರಾಹುಕಾಲದಲ್ಲೇ ಮಂಡಿಸಿದ್ದು, ಒಳ್ಳೆಯ ಬಜೆಟ್ ನೀಡಿದ್ದೇನೆ” ಎಂದು ಸಿದ್ದರಾಮಯ್ಯ ಹೇಳಿದರು.

ಸಮಾರಂಭದಲ್ಲಿ ಚಿತ್ರದುರ್ಗದ ಬೃಹನ್‌ಮಠದ ಶಿವಮೂರ್ತಿ ಶರಣರು, ರಾಜ್ಯದ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಕಾಂಜರಾಜ್, ಮಧುಸೂದನ ನಾಯಕ್, ರಾಜ್ಯ ವಕೀಲರ ಪರಿಷತ್  ಅಧ್ಯಕ್ಷ ಎ.ಆರ್. ಪಾಟೀಲ್, ಭಾರತೀಯ ವಕೀಲರ ಪರಿಷತ್‌ನ ಉಪಾಧ್ಯಕ್ಷ ಮಿತ್ತಲ್ ಕೋಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Write A Comment