ಕರ್ನಾಟಕ

ಎಪ್ರಿಲ್‌ 12 ರಂದು ಕೆಮೆಸ್ಟ್ರಿ ಮರುಪರೀಕ್ಷೆ ಗೆ ಹೈಕೋರ್ಟ್‌ ಅಸ್ತು

Pinterest LinkedIn Tumblr

puಬೆಂಗಳೂರು : ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಾರ್ಚ್‌ 21 ರಂದು ನಡೆದಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ವಿಷಯದ ಮರು ಪರೀಕ್ಷೆಯನ್ನು ಎಪ್ರಿಲ್‌ 12 ರಂದು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠ ಗುರುವಾರ ಸೂಚಿಸಿದೆ.

ಮರುಪರೀಕ್ಷೆ ನಡೆಸುವುದರಿಂದ ಈಗಾಗಲೇ ಪರೀಕ್ಷೆ ಬರೆದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಮತ್ತು ಮರುಪರೀಕ್ಷೆ ನಡೆಸುವುದು ಕಾನೂನುಬಾಹಿರ. ಹೀಗಾಗಿ, ಮರುಪರೀಕ್ಷೆ ನಡೆಸದಂತೆ ಸರ್ಕಾರ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಬಿ.ಎಚ್‌.ಚಂದ್ರಶೇಖರ್‌ ಸೇರಿ ಮೂವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಪರಿಶೀಲನೆ ನಡೆಸಿದ ಬಳಿಕ ಅರ್ಜಿ ಯನ್ನು ವಜಾ ಮಾಡಿದ ಕೋರ್ಟ್‌ನ ವಿಭಾಗೀಯ ಪೀಠ ಈ ವಿಚಾರದಲ್ಲಿ ಕೋರ್ಟ್‌ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರಿಂದ ಮರು ಪರೀಕ್ಷೆ ನಡೆಯಲೇ ಬೇಕು ಎಂದು ಅಭಿಪ್ರಾಯಪಟ್ಟಿದೆ.

ಮಾರ್ಚ್‌ 21 ರಂದು ಸೋರಿಕೆಯಾದ ಬಳಿಕ ಮಾರ್ಚ್‌ 31 ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಐತಿಹಾಸಿಕವಾಗಿ 2 ನೇ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು ಪ್ರಮುಖ ಆರೋಪಿಗಳು ಸೇರಿದಂತೆ ಹಲವರನ್ನು ಈಗಾಗಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.
&ಉದಯವಾಣಿ

Write A Comment